ಟ್ರಾಕ್ಟರ್ ನೋಂದಾಯಿಸಲು ಆರ್‌ಟಿಒ ನಿರಾಕರಣೆ; ರೈತರಿಗೆ ಸಂಕಷ್ಟ
ಬಿಎಸ್-3 ವಾಹನ ನಿಷೇಧ ಕಾಯ್ದೆಯ ನೆಪ

ಹೊಸದಿಲ್ಲಿ, ಎ.30: ಬಿಎಸ್-3 ವಾಹನಗಳ ಮೇಲೆ ಸುಪ್ರೀಂಕೋರ್ಟ್ ನಿಷೇಧದ ಹಿನ್ನೆಲೆಯಲ್ಲಿ ಟ್ರಾಕ್ಟರ್‌ಗಳು ಮತ್ತು ನಿರ್ಮಾಣ ಸಾಧನ ವಾಹನಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ಭಾರೀ ಹೊಡೆತ ಬಿದ್ದಿದೆ. ಈ ವಾಹನಗಳಿಗೆ ಪರಿಸರ ಮಾಲಿನ್ಯ ನಿಯಂತ್ರಣ ಕಾಯ್ದೆಯಡಿ ಪ್ರತ್ಯೇಕ ಮಾನದಂಡವಿದ್ದರೂ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ(ಆರ್‌ಟಿಒ)ಗಳು ಚತುಷ್ಚಕ್ರ ವಾಹನ ಎಂಬ ಕಾರಣ ನೀಡಿ ಇವುಗಳ ನೋಂದಾವಣೆಗೆ ಅವಕಾಶ ನೀಡುತ್ತಿಲ್ಲ. ಎಪ್ರಿಲ್ 1ರಿಂದ ನಿಷೇಧ ಜಾರಿಗೆ ಬಂದ ಬಳಿಕ ದಿಲ್ಲಿ, ಉ.ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಅಸ್ಸಾಂ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಆರ್‌ಟಿಒಗಳು ಸುಮಾರು 25000 ಟ್ರಾಕ್ಟರ್‌ಗಳು, 1,500ಕ್ಕೂ ಹೆಚ್ಚು ನಿರ್ಮಾಣ ಸಾಧನ ವಾಹನಗಳನ ನೋಂದಾವಣೆಗೆ ನಿರಾಕರಿಸಿದ್ದಾರೆ.
ಟ್ರಾಕ್ಟರ್‌ಗಳು ‘ಭಾರತ್ ಟ್ರಾಕ್ಟರ್ ವಾಯುಮಾಲಿನ್ಯ’ ಮಾನದಂಡ 3ಎ ಅನುಸರಿಸಿದರೆ ನಿರ್ಮಾಣ ಸಾಧನ ವಾಹನಗಳು ‘ಭಾರತ್ ಸ್ಟೇಜ್ 3’ ಮಾನದಂಡ ಅನುಸರಿಸುತ್ತಿವೆ. ದೇಶದಲ್ಲಿ ಇತರ ವಾಹನಗಳು ಅನುಸರಿಸುವ ವಾಯುಮಾಲಿನ್ಯ ಮಾನದಂಡಕ್ಕಿಂತ ಇವು ಭಿನ್ನವಾಗಿವೆ.
ದ್ವಿಚಕ್ರ, ತ್ರಿಚಕ್ರ, ಚತುಷ್ಚಕ್ರ ಅಥವಾ ವಾಣಿಜ್ಯ ವಾಹನಗಳಿರಲಿ, ಇವು ಬಿಎಸ್-4 ವ್ಯವಸ್ಥೆ ಹೊಂದಿಲ್ಲದಿದ್ದರೆ ಇವನ್ನು ಎಪ್ರಿಲ್ 1ರಿಂದ ಮಾರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ಈ ಆದೇಶವನ್ನು ಹಲವು ರಾಜ್ಯಗಳಲ್ಲಿ ಆರ್‌ಟಿಒ ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದರಿಂದ ಟ್ರಾಕ್ಟರ್ ಅಥವಾ ನಿರ್ಮಾಣ ಸಾಧನ ವಾಹನಗಳನ್ನು ನೋಂದಾವಣೆ ಮಾಡಲಾಗುತ್ತಿಲ್ಲ ಎಂದು ಭಾರತೀಯ ನಿರ್ಮಾಣ ಸಾಧನ ಉತ್ಪಾದಕರ ಸಂಘದ ಅಧ್ಯಕ್ಷ ಆನಂದ್ ಸುಂದರೇಶನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಿರ್ಮಾಣ ಕಾಮಗಾರಿ ಅಧಿಕವಾಗಿರುವ ಸಂದರ್ಭದಲ್ಲೇ ಈ ರೀತಿ ಆಗಿರುವುದು ದುರದೃಷ್ಟಕರ. ಬಹುತೇಕ ನಿರ್ಮಾಣ ಸಂಸ್ಥೆಗಳು ಕಾರ್ಯ ಸ್ಥಗಿತಗೊಳಿಸಿದ ಕಾರಣ ದಿನಗೂಲಿ ನೌಕರರು ಸಮಸ್ಯೆಗೆ ಸಿಲುಕಿದ್ದಾರೆ .ಅಲ್ಲದೆ ನಿರ್ಮಾಣ ಸಾಧನ ವಾಹನಗಳ ಮಾರಾಟ ತಿಂಗಳಿಗೆ ಶೇ.30ರಷ್ಟು ಕಡಿಮೆಯಾಗಿದೆ ಎಂದವರು ತಿಳಿಸಿದ್ದಾರೆ.
ಟ್ರಾಕ್ಟರ್ ಉತ್ಪಾದಕ ಮತ್ತು ಮಾರಾಟ ಮಾಡುವ ಸಂಸ್ಥೆಗಳೂ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಟ್ರಾಕ್ಟರ್‌ಗಳು ಚತುಷ್ಚಕ್ರ ಹೊಂದಿರುವ ಕಾರಣ ಬಿಎಸ್-4 ಮಾನದಂಡ ಅನ್ವಯಿಸುತ್ತದೆ ಎಂಬುದು ಆರ್‌ಟಿಒಗಳ ವಾದ. ಆದರೆ ಕೃಷಿ ಕಾರ್ಯದ ಟ್ರಾಕ್ಟರ್‌ಗಳು ಪ್ರತ್ಯೇಕ ವಾಯುಮಾಲಿನ್ಯ ಮಾನದಂಡ ಹೊಂದಿವೆ ಎಂಬುದು ಅವರಿಗೇ ತಿಳಿದಿಲ್ಲ. ಈ ಬಗ್ಗೆ ರಾಜ್ಯ ಸಾರಿಗೆ ಆಯುಕ್ತರು ಅಥವಾ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಸ್ಪಷ್ಟನೆ ನೀಡಬೇಕು ಎಂದು ಟ್ರಾಕ್ಟರ್ ಉತ್ಪಾದಿಸುವ ಸಂಸ್ಥೆಯ ಅಧಿಕಾರಿಯೋರ್ವರು ಹೇಳುತ್ತಾರೆ.
ಒಂದು ಅಂದಾಜಿನ ಪ್ರಕಾರ ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿ ಉ.ಪ್ರದೇಶ ರಾಜ್ಯವೊಂದರಲ್ಲೇ ಸುಮಾರು 14,660 ಟ್ರಾಕ್ಟರ್‌ಗಳು ಮಾರಾಟವಾಗಿವೆ. ಮಹಾರಾಷ್ಟ್ರದಲ್ಲಿ 10000, ತೆಲಂಗಾಣದಲ್ಲಿ 4,600, ಆಂಧ್ರಪ್ರದೇಶದಲ್ಲಿ 3,250, ತಮಿಳುನಾಡಿನಲ್ಲಿ 2,150 ಮತ್ತು ಅಸ್ಸಾಂನಲ್ಲಿ 1,100 ಟ್ರಾಕ್ಟರ್ ಮಾರಾಟವಾಗಿದೆ. ಟ್ರಾಕ್ಟರ್ ಖರೀದಿಸಿದ ರೈತರು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಇದೀಗ ನಿಯಮವನ್ನು ಸ್ಪಷ್ಟಗೊಳಿಸಬೇಕೆಂದು ಕೋರಿ ಟ್ರಾಕ್ಟರ್ ಉತ್ಪಾದಕ ಸಂಸ್ಥೆಗಳು ಸುಪ್ರೀಂಕೋರ್ಟ್ ಮೆಟ್ಟಲೇರುವ ನಿರೀಕ್ಷೆಯಿದೆ.