ಟ್ರಂಪ್‌ರ ಗೆಲುವಿಗಾಗಿ ಪೂಜೆ ಹೋಮ ಯಜ್ಞ ಮಾಡಿದವರು ಈಗ ಏನನ್ನುತ್ತಾರೆ?
ಮಾನ್ಯರೆ,
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ ಟ್ರಂಪ್ ಗೆಲ್ಲಲೇಬೇಕು ಎಂದು ಸಂಘ ಪರಿವಾರದ ಕೆಲವರು ದೇಶದೆಲ್ಲೆಡೆ ಹೋಮ ಹವನ ಯಜ್ಞ ಮಾಡಿದ್ದರು. ನಂತರ ಟ್ರಂಪ್ ಗೆದ್ದಾಗಲಂತೂ ಟ್ರಂಪ್‌ರ ಮುಖವಾಡ ತೊಟ್ಟು ಸಿಹಿ ಹಂಚಿ ಬೀದಿಯಲ್ಲಿ ಕುಣಿದಿದ್ದರು. ತಮ್ಮ ಪೂಜೆ ಹೋಮ ಹವನಗಳಿಗೆ ಒಲಿದು ಟ್ರಂಪ್‌ರನ್ನು ಗೆಲ್ಲಿಸಿದ್ದಕ್ಕಾಗಿ ಇವರು ಮತ್ತೆ ದೇವರಿಗೆ ವಿಶೇಷ ಪೂಜೆ ಮಾಡಲು ಮರೆಯಲಿಲ್ಲ. ಜನವರಿ 20ಕ್ಕೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನ ಟ್ರಂಪ್, ಯಹೂದಿ, ಮುಸ್ಲಿಂ, ಬೌದ್ಧ ಮತ್ತು ಹಿಂದೂ ಪುರೋಹಿತರನ್ನು ಕರೆಸಿ ಐದೈದು ನಿಮಿಷಗಳ ಆಶೀರ್ವಚನ ಮಾಡಿಸಿಕೊಂಡಿದ್ದರು. ಆದರೆ ಭಾರತೀಯ ಮಾಧ್ಯಮಗಳು ಮಾತ್ರ ವೈಟ್‌ಹೌಸಿನಲ್ಲಿ ಕೇವಲ ನಾರಾಯಣಾಚಾರ್ಯ ಎಂಬ ವೈದಿಕನ ಆಶೀರ್ವಚನದ ದೃಶ್ಯ ಮಾತ್ರ ಪ್ರಸಾರ ಮಾಡಿದ್ದು. ಅಷ್ಟೇ ಅಲ್ಲ ಭಾರತೀಯ ವಾಸ್ತು ತಜ್ಞರ ಸಲಹೆ ಕೇಳಿ ಟ್ರಂಪ್ ತನ್ನ ಶ್ವೇತಭವನದ ಕಿಟಕಿ ಬಾಗಿಲನ್ನು ಬದಲಾಯಿಸಿದರು ಎಂಬ ಸುಳ್ಳು ಸುದ್ದಿಯನ್ನೂ ಸಂಘಿಗಳು ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ ತಮ್ಮ ವೈದಿಕ ಆಚಾರಗಳೆಲ್ಲಾ ಏಳು ಸಮುದ್ರ ದಾಟಿ ಅಮೆರಿಕದ ಅಧ್ಯಕ್ಷರ ಕಚೇರಿಗೂ ತಲುಪಿದೆ ಎಂದು ಪೊಳ್ಳು ಪ್ರಚಾರ ಮಾಡಿದರು.
ಆದರೆ ನಂತರ ಆಗಿದ್ದೇನು? ಟ್ರಂಪ್ ಅಧಿಕಾರಕ್ಕೆ ಬಂದ 3 ತಿಂಗಳೊಳಗಾಗಿ 5 ಭಾರತೀಯರನ್ನು ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಬರ್ಬರ ಕೊಲೆ ಮಾಡಲಾಯಿತು. ಟ್ರಂಪ್‌ನ ಗೆಲುವಿಗಾಗಿ ಹೋಮ ಹವನ ಪೂಜೆ ಮಾಡಿದವರು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲೇ ಇಲ್ಲ.ಅಮೆರಿಕದಲ್ಲಿ ಇರುವ ಭಾರತೀಯರೆಲ್ಲ ಈಗ ಭಯದ ವಾತಾವರಣದ ಲ್ಲಿಯೇ ದಿನ ದೂಡುತ್ತಿದ್ದಾರೆೆ. ಇದಕ್ಕಾಗಿಯೇ ಭಾರತದ ಸಂಘಿಗಳು ಟ್ರಂಪ್‌ರ ಗೆಲುವಿಗಾಗಿ ಪೂಜೆ ಹೋಮ ಯಜ್ಞ ಮಾಡಿದ್ದೇ? ಟ್ರಂಪ್ ಸಹ ಸಂಘಿಗಳಂತೆ ಮುಸ್ಲಿಂ ದ್ವೇಷಿ ಎಂಬ ಒಂದೇ ಕಾರಣಕ್ಕೆ ಭಾರತದ ಸಂಘಿಗಳಿಗೆ ಟ್ರಂಪ್ ಅಷ್ಟು ಪ್ರೀಯರಾಗಿದ್ದು. ಕೊನೆಗೆ ಯಾರು ಉತ್ತಮರು? ಹಿಂದೂಗಳನ್ನು ಕೊಲ್ಲುತ್ತಿರುವ ಮುಸ್ಲಿಂ ದ್ವೇಷಿ ಟ್ರಂಪರ ಆಡಳಿತವೇ ಅಥವಾ ಲಕ್ಷಾಂತರ ಭಾರತೀಯ ಹಿಂದೂಗಳಿಗೆ ಜೀವನಾಧಾರ ನೌಕರಿ ಒದಗಿಸಿರುವ ಕೊಲ್ಲಿಯ ಮುಸ್ಲಿಂ ದೇಶಗಳೇ? ಅಮೆರಿಕದಲ್ಲಿ ಟ್ರಂಪ್ ಸರಕಾರ ವಿದೇಶಿಯರಿಗೆ ಎಚ್1ಬಿ ವಿಸಾದ ಮೇಲೆ ನಿರ್ಬಂಧ ಹೇರಿದ್ದರಿಂದ ಅತೀ ಹೆಚ್ಚು ಕೆಲಸ ಕಳೆದು ಕೊಳ್ಳಲಿರುವವರು ಭಾರತೀಯ ಟೆಕ್ಕಿಗಳು. ಕೆಲಸ ಕಳೆದುಕೊಂಡು ಹಿಂದಿರುಗುವ ಟೆಕ್ಕಿಗಳಿಗೆ ಭಾರತದಲ್ಲಿ ಸೂಕ್ತ ನೌಕರಿ ಒದಗಿಸುವುದಾಗಿ ಇಲ್ಲಿಯ ಸರಕಾರ ಹೇಳಿದ್ದು ಸಮಾಧಾನದ ವಿಷಯ. ಆದರೆ ಟೆಕ್ಕಿಗಳ ದೊಡ್ಡ ಸಮಸ್ಯೆ ಏನೆಂದರೆ ಅವರಿಗೆ ಇಲ್ಲಿಯ ಬರ್ಗರ್‌ಗಳಲ್ಲಿ ಬೀಫ್ ಇರುವುದಿಲ್ಲವಲ್ಲ ಎಂಬುದೇ ದೊಡ್ಡ ಚಿಂತೆಯಂತೆ. ಯಾಕೆಂದರೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಬಹುತೇಕ ಟೆಕ್ಕಿಗಳಿಗೆ ಪೌಷ್ಟಿಕ ಗೋಮಾಂಸದ ಖಾದ್ಯಗಳನ್ನು ತಿಂದು ಅಭ್ಯಾಸವಾಗಿ ಹೋಗಿದೆ. ಅಮೆರಿಕದಲ್ಲಿ ಗೋಮಾಂಸವಿಲ್ಲದ ಬರ್ಗರ್ ಸಿಗುವುದೇ ಇಲ್ಲ. ಈ ಸತ್ಯ ಅವರ ಇಲ್ಲಿಯ ಹಿರಿಯರಿಗೆ ಗೊತ್ತಿಲ್ಲದಿರುವುದು ಬೇರೆ ವಿಷಯ. ಅಮೆರಿಕದಲ್ಲಿರುವ ಹೊಟೇಲ್‌ಗಳ ಮಾಲಕರು ಹೆಚ್ಚಾಗಿ ಗುಜರಾತಿ ಪಟೇಲರು. ಇವರ ಹೊಟೇಲ್‌ಗಳಲ್ಲಿ ಗೋಮಾಂಸದ ಖಾದ್ಯಗಳನ್ನು ಮುಕ್ತವಾಗಿ ಪೂರೈಸಲಾಗುತ್ತದೆ. ಅಮೆರಿಕದ ಜನಾಂಗೀಯ ದ್ವೇಷ ದಿಂದಾಗಿ ಈಗ ಗೋಮಾಂಸ ಮಾರುವ ಈ ಗುಜರಾತಿ ಪಟೇಲರ ಹೊಟೇಲ್‌ಗಳಿಗೆ ಗಿರಾಕಿಗಳು ತುಂಬಾ ಕಡಿಮೆಯಾಗಿ ಉಭಯ ಸಂಕಟ ಉಂಟಾಗಿದೆ. ಗುಜರಾತಿಗಳದ್ದು ಭಾರತದಲ್ಲಿ ಗೋರಕ್ಷೆ ಆದರೆ ಅಮೆರಿಕದಲ್ಲಿ ಬಂಪರ್ ಲಾಭಕ್ಕಾಗಿ ಗೋಭಕ್ಷೆ. ಒಟ್ಟಾರೆ ಊರಿಗೆ ತಕ್ಕಂತೆ ವೇಷ. ಲಾಭಕ್ಕೆ ತಕ್ಕಂತೆ ಊಟ. ಆದರೆ ನಮ್ಮಲ್ಲಿ ಬಡ ದಲಿತರು ಗೋಮಾಂಸ ತಿಂದರೆ ಅದು ಮಹಾ ತಪ್ಪು ಎನ್ನುವಂತೆ ಸಂಘಪರಿವಾರದವರು ಮಾರಣಾಂತಿಕೆ ಹಲ್ಲೆ ಮಾಡುತ್ತಾರೆ. ಹಾಗೂ ಈ ಪುಂಡರನ್ನು ಬಚಾವ್ ಮಾಡಲು ರಾಷ್ಟ್ರೀಯ ಪಕ್ಷಗಳ ನೇತಾರರು ಒಟ್ಟಾಗಿ ಪ್ರಯತ್ನಿಸುತ್ತಾರೆ. ಎಂತಹ ವಿರೋಧಾಭಾಸ..!!







