ಎಚ್ಚರ... ವಿಮಾನ ಏರುವ ಮುನ್ನ ಇದನ್ನೊಮ್ಮೆ ಓದಿ!

ಹೊಸದಿಲ್ಲಿ, ಮೇ 1: ಕಳೆದ ವರ್ಷದ ಆಗಸ್ಟ್ 22ರಂದು ಒಂದು ವಿಮಾನ ಅಪಘಾತ ಕೂದಲೆಳೆ ಅಂತರದಲ್ಲಿ ತಪ್ಪಿತು. ಇಂಡಿಗೋ ವಿಮಾನ (ಐಜಿಓ258) ಹಾಗೂ ಏರ್‌ಇಂಡಿಯಾ (ಎಐಸಿ995) ಸಮಾನ ಎತ್ತರದಲ್ಲಿ ಹಾರುತ್ತಿದ್ದುದು ಏರ್ ಟ್ರಾಫಿಕ್ ಕಂಟ್ರೋಲರ್ ಗಮನಕ್ಕೆ ಬಂತು. ಪರಸ್ಪರ ಢಿಕ್ಕಿಯಾಗುವುದು ತಪ್ಪಿಸಲು ತಕ್ಷಣ ಏರ್‌ಇಂಡಿಯಾ ವಿಮಾನವನ್ನು ಎರಡಕ್ಕೆ ತಿರುಗಲು ಸೂಚಿಸಿದರು. ಆದರೆ ಇದು ಇನ್ನೊಂದು ಇಂಡಿಗೋ ವಿಮಾನ (ಐಜಿಓ 528) ಮಾರ್ಗಕ್ಕೆ ಹೊರಳಿತು. ಆದರೆ ಮೂರೂ ವಿಮಾನಗಳು ಸುರಕ್ಷಿತವಾಗಿ ಕೆಳಕ್ಕೆ ಇಳಿಯುವುದರೊಂದಿಗೆ ಭೀಕರ ದುರಂತ ತಪ್ಪಿತು!
2016ರಲ್ಲಿ ಸಂಭಾವ್ಯ ದುರಂತ ತಪ್ಪಿದ 32 ಪ್ರಕರಣಗಳ ಪೈಕಿ ಇದು ಕೂಡಾ ಒಂದು. ಭಾರತದ ನಾಗರಿಕ ವಿಮಾನಯಾನ ಇತಿಹಾಸದಲ್ಲೇ ಇಂಥ ಸಂಭಾವ್ಯ ಅಪಘಾತ ಪ್ರಕರಣಗಳು ವರದಿಯಾದವು ಎಂದು ’ಹಿಂದೂಸ್ತಾನ್ ಟೈಮ್ಸ್’ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ನಾಗರಿಕ ವಿಮಾನಯಾನ ಸಚಿವಾಲಯ ಉತ್ತರಿಸಿದೆ.
2013ರಲ್ಲಿ ತಪ್ಪಿದ ಸಂಭಾವ್ಯ ಅಪಾಯ ಪ್ರಕರಣಗಳಿಗಿಂತ 2016ರಲ್ಲಿ ಶೇಕಡ 40 ಪ್ರಕರಣಗಳು ಹೆಚ್ಚಿವೆ. ಇತ್ತೀಚಿನ ದಿನಗಳಲ್ಲಿ ವಾಯುಯಾನ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸುರಕ್ಷತಾ ಗುಣಮಟ್ಟವನ್ನು ನಿರ್ಲಕ್ಷಿಸಲಾಗುತ್ತಿದೆ ಎನ್ನುವುದು ತಜ್ಞರ ಅಭಿಮತ. ಮಾನವ ಸಂಪನ್ಮೂಲ ಕೊರತೆ, ತರಬೇತಿ ಮತ್ತು ವಾಯುಯಾನ ಸಂಚಾರಕ್ಕೆ ಲಭ್ಯವಿರುವ ವಾಯುಪ್ರದೇಶದ ಕೊರತೆ ಇದಕ್ಕೆ ಕಾರಣ ಎಂದು ತಜ್ಞರು ವಿಶ್ಲೇಷಿಸುತ್ತಾರೆ.
"ಸುರಕ್ಷತೆ ದೃಷ್ಟಿಯಿಂದ ಗರಿಷ್ಠ ಪ್ರಮಾಣದಲ್ಲಿ ಪ್ರತ್ಯೇಕತೆ ಅಗತ್ಯವಾಗಿದ್ದು, ಹೆಚ್ಚುತ್ತಿರುವ ವಿಮಾನ ಸಂಚಾರದಿಂದಾಗಿ ಪ್ರತಿಯೊಂದು ವಿಮಾನಗಳು ಸರಹದ್ದಿನ ಸನಿಹಕ್ಕೆ ಬರುತ್ತಿವೆ. ಇದರಿಂದಾಗಿ ಒಂದು ವಿಮಾನದ ವಾಯುವಲಯ ಮತ್ತೊಂದು ವಿಮಾನದಿಂದ ಆಕ್ರಮಣಕ್ಕೆ ಒಳಗಾಗುವ ಸಾಧ್ಯತೆ ಅಧಿಕ" ಎಂದು ವಾಯು ಸಂಚಾರ ಮೇಲುಸ್ತುವಾರಿ ವಿಭಾಗದ ನಿವೃತ್ತ ಆಡಳಿತ ನಿರ್ದೇಶಕ ಎಸ್.ಎಸ್.ಸಿಂಗ್ ಅಭಿಪ್ರಾಯಪಡುತ್ತಾರೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಗೆ ಕಳೆದ ವಾರ ಚಾಲನೆ ದೊರಕಿದ್ದು, ಇದರಿಂದ ವಾಯುಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ವಾಯು ಸುರಕ್ಷಾ ಶಿಷ್ಟಾಚಾರಗಳನ್ನು ಪಾಲಿಸದ 151 ಮಂದಿ ಪೈಲಟ್‌ಗಳನ್ನು ಕೂಡಾ 2016ರಲ್ಲಿ ಅಮಾನತು ಮಾಡಲಾಗಿದ್ದು, ಇದು ಕೂಡಾ ಸಾರ್ವಕಾಲಿಕ ದಾಖಲೆ. ಇದುವರೆಗೆ 2012ರಲ್ಲಿ ಗರಿಷ್ಠ (109) ಮಂದಿಯನ್ನು ಅಮಾನತು ಮಾಡಲಾಗಿತ್ತು.