ಕಾಶ್ಮೀರ ಸಮಸ್ಯೆಗೆ ಸಂಧಾನವೇ ಸೂಕ್ತ: ಎರ್ದೊಗಾನ್

ಹೊಸದಿಲ್ಲಿ, ಮೇ 1: ಸುದೀರ್ಘ ಕಾಲದಿಂದ ಉಳಿದಿರುವ ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ದ್ವಿಪಕ್ಷೀಯ ಸಂಧಾನ ಮಾತುಕತೆಯೇ ಸೂಕ್ತ ಎಂದು ಟರ್ಕಿ ಅಧ್ಯಕ್ಷ ರೆಸಿಪ್ ತಯ್ಯಬ್ ಎರ್ದೊಗಾನ್ ಹೇಳಿದ್ದಾರೆ. ಈ ಮೂಲಕ ಭಾರತದ ನಿಲುವನ್ನು ಟರ್ಕಿ ಅಧ್ಯಕ್ಷರು ಸಮರ್ಥಿಸಿಕೊಂಡಂತಾಗಿದೆ.
ಎರಡು ದಿನಗಳ ಭಾರತ ಭೇಟಿಗೆ ಹೊರಡುವ ಮುನ್ನ ಸುದ್ದಿವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಸಮಸ್ಯೆಯನ್ನು ಪಾಕಿಸ್ತಾನಿ ಪ್ರಧಾನಿ ನವಾಝ್ ಷರೀಫ್ ಜತೆಗೆ ಸುಧೀರ್ಘವಾಗಿ ಸಮಾಲೋಚಿಸುವುದಾಗಿಯೂ ಪ್ರಕಟಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ಹೀಗೆ ಎರಡೂ ದೇಶಗಳನ್ನು ಅಣ್ವಸ್ತ್ರ ಸರಬರಾಜುದಾರ ದೇಶಗಳ ಗುಂಪಿಗೆ (ಎನ್‌ಎಸ್‌ಜಿ) ಸೇರಿಸುವುದು ಅಗತ್ಯ ಎಂದು ಪುನರುಚ್ಚರಿಸಿದರು. ಆದರೆ ಎನ್‌ಎಸ್‌ಜಿ ವಿಚಾರದಲ್ಲಿ ಪಾಕಿಸ್ತಾನದ ಜತೆ ಭಾರತವನ್ನು ಹೋಲಿಸಲಾಗದು ಎನ್ನುವುದು ಭಾರತದ ನಿಲುವಾಗಿದೆ. ಭಾರತ ಈ ಪ್ರವೃತ್ತಿಯನ್ನು ಬಿಡಬೇಕು ಎಂದೂ ಅವರು ಸಲಹೆ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ಎರ್ದೊಗಾನ್ ಭೇಟಿ ವೇಳೆ ಹೆಚ್ಚು ಧನಾತ್ಮಕ ಅಂಶಗಳನ್ನು ಒಳಗೊಂಡ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗುವುದು ಎಂಬ ಸುಳಿವು ನೀಡಿದೆ. ಸೋಮವಾರ ಎರ್ದೊಗಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸುವರು.
ರಕ್ಷಣೆ, ಭಯೋತ್ಪಾದನೆ ನಿಗ್ರಹ, ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಮೂಲಸೌಕರ್ಯ ಹೂಡಿಕೆ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಬಲಪಡಿಸುವ ಬಗ್ಗೆ ಉಭಯ ಮುಖಂಡರು ಚರ್ಚಿಸುವರು ಎಂದು ಮೂಲಗಳು ಹೇಳಿವೆ.







