ಬಿಜೆಪಿ ನಾಯಕ ತಿವಾರಿ ಮನೆ ಮೇಲೆ ಪುಂಡರ ದಾಳಿ; ನಾಲ್ವರ ಬಂಧನ

ಹೊಸದಿಲ್ಲಿ, ಮೇ 1: ದಿಲ್ಲಿಯ ಬಿಜೆಪಿ ನಾಯಕ ಹಾಗೂ ಸಂಸದ ಮನೋಜ್ ತಿವಾರಿ ಮನೆ ಮೇಲೆ ರವಿವಾರ ರಾತ್ರಿ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
8ರಿಂದ 10 ಮಂದಿಯ ತಂಡ ಮನೋಜ್ ತಿವಾರಿ ಮನೆ ಮೇಲೆ ದಾಳಿ ನಡೆಸಿ, ಅವರ ಮನೆಯಲ್ಲಿದ್ದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ದಾಳಿ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ಇದರ ಆಧಾರದಲ್ಲಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಮನೋಜ್ ತಿವಾರಿ ಅವರು ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರಿಗೆ ಮಾಹಿತಿ ನೀಡಿದ್ದಾರೆ. ದಾಳಿ ನಡೆಯುವ ಹೊತ್ತಿಗೆ ಮನೋಜ್ ತಿವಾರಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ . ರೋಡ್ ರೇಜ್ ವಿವಾದ ದಾಳಿಗೆ ಕಾರಣ ಎಂಬ ಗುಮಾನಿಯನ್ನು ಪೊಲೀಸರು ವ್ಯಕ್ತಪಡಿಸಿದ್ದರೂ, ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ಧಾರೆ.
ಇತ್ತೀಚೆಗೆ ದಿಲ್ಲಿಯ ಮೂರು ಮಹಾನಗರಪಾಲಿಕೆಗೆ ನಡೆದ ಚುನಾವಣೆಯಲ್ಲಿ ಮನೋಜ್ ತಿವಾರಿ ನಾಯಕತ್ವದಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿತ್ತು.





