ದಿಲ್ಲಿಯಲ್ಲಿ ಶೂಟೌಟ್ ; ಓರ್ವ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಮೂವರು ಬಲಿ

ಹೊಸದಿಲ್ಲಿ, ಮೇ 1: ದಿಲ್ಲಿಯ ಮಿಯಾನ್ ವಾಲಿ ಪ್ರದೇಶದಲ್ಲಿ ವಿರೋಧಿ ಗುಂಪುಗಳ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಓರ್ವ ಪೊಲೀಸ್ ಉಪನಿರೀಕ್ಷಕರು ಸೇರಿದಂತೆ ಮೂವರು ಮೃತಪಟ್ಟ ಘಟನೆ ರವಿವಾರ ತಡ ರಾತ್ರಿ ನಡೆದಿದೆ.
ಸಬ್ ಇನ್ಸಪೆಕ್ಟರ್ ಅರುಣ್, ಸ್ಥಳೀಯ ಕ್ರಿಮಿನಲ್ ಭುಪೇಂದ್ರ ಹಾಗೂ ಆತನ ಸ್ನೇಹಿತ ಅರ್ಜುನ್ ಶೂಟೌಟ್ ನಿಂದ ಮೃತಪಟ್ಟಿದ್ದಾರೆ. ಪೊಲೀಸ್ ಪೇದೆ ಕುಲದೀಪ್ ಎಂಬವರಿಗೆ ಗಂಭೀರ ಗಾಯವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭುಪೇಂದ್ರ ಎಂಬಾತನ ವಿರುದ್ಧ ಹಲವು ಕ್ರಿಮಿನಲ್ ಕೇಸ್ ಗಳು ದಾಖಲಾಗಿದ್ದು, ಈತ ತನ್ನ ಗೆಳೆಯ ಅರ್ಜುನ್, ಸಬ್ ಇನ್ಸಪೆಕ್ಟರ್ ಅರುಣ್ ವಿಜಯ್ ಹಾಗೂ ಪೇದೆ ಕುಲ್ದೀಪ್ ಎಂಬುವವರ ಜೊತೆಯಲ್ಲಿ ಕಾರಿನಲ್ಲಿ ಕುಳಿತಿದ್ದಾಗ ರಾತ್ರಿ 11.15ರ ಸುಮಾರಿಗೆ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾದರು ಎಂದು ತಿಳಿದು ಬಂದಿದೆ. ಇದರ ಪರಿಣಾಮವಾಗಿ ಭುಪೇಂದ್ರ, ಅರ್ಜುನ್ ಮತ್ತು ಪಿಎಸ್ಐ ವಿಜಯ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಪೇದೆ ಕುಲ್ದೀಪ್ ಅವರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ
ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿ ಹೇಳಿಕೆ ಪಡೆಯಲು ಗಾಯಗೊಂಡಿರುವ ಪೊಲೀಸ್ ಪೇದೆ ಕುಲದೀಪ್ ಅವರ ಚೇತರಿಕೆಗೆ ಪೊಲೀಸರು ಕಾಯುತ್ತಿದ್ದಾರೆ.





