ಇಂದಿನಿಂದ ಕೇರಳದಲ್ಲಿ ಮಲೆಯಾಳಂ ಕಡ್ಡಾಯ: ಕನ್ನಡಕ್ಕೆ ವಿನಾಯಿತಿ ಮುಂದುವರಿಕೆ

ತಿರುವನಂತಪುರಂ,ಮೇ. 1: ಮಲೆಯಾಳಂ ಇಂದಿನಿಂದ ಅಧಿಕೃತಭಾಷೆಯಾಗಿ ಕೇರಳದಲ್ಲಿ ಜಾರಿಗೊಂಡಿದೆ. ಸೆಕ್ರಟರಿಯೇಟ್ ಸಹಿತ ರಾಜ್ಯದ ಎಲ್ಲ ಸರಕಾರಿಕಚೇರಿಗಳಲ್ಲಿ ಇನ್ನುಮುಂದೆ ಮಲೆಯಾಳಂ ಭಾಷೆಯಲ್ಲಿ ವ್ಯವಹರಿಸುವುದು ಕಡ್ಡಾಯವಾಗಿದೆ. ಸರಕಾರಿ, ಅನುದಾನಿತ, ಸಾರ್ವಜನಿಕ ಕ್ಷೇತ್ರ,ಸ್ಥಳೀಯಾಡಳಿತ, ಸಹಕಾರಿ ಸಂಸ್ಥೆಗಳಿಗೆ ಕಾನೂನು ಕಡ್ಡಾಯವಾಗಿ ಅನ್ವಯಗೊಳ್ಳುತ್ತದೆ.
ದೇಶಗಳು, ಸರ್ಕ್ಯುಲರ್‌ಗಳು, ಪತ್ರಗಳು ಮಲೆಯಾಳಂ ಭಾಷೆಯಲ್ಲೇ ಇರಬೇಕು. ಕಚೇರಿಬೋರ್ಡುಗಳು ಮಲೆಯಾಳಂ ಇಂಗ್ಲಿಷ್‌ಗೆ ಸಮಾನವಾದ ರೀತಿಯಲ್ಲಿ ಅಷ್ಟೇ ದೊಡ್ಡದಾಗಿ ಇರಬೇಕು. ಕಚೇರಿ ಚಿಹ್ನೆಗಳು, ಅಧಿಕಾರಿಗಳ ಹೆಸರು, ಅಧಿಕೃತ ಹುದ್ದೆ ಮುಂತಾದುವೆಲ್ಲ ಮಾತೃಭಾಷೆಯಲ್ಲೇ ಬರೆದಿರಬೇಕು, ಆಡಳಿತ ಭಾಷೆ ಮಲೆಯಾಳವಾಗುವುದಕ್ಕೆ ಸಂಬಂಧಿಸಿ ನಡೆದ ಕೆಲಸಗಳ ಬಗ್ಗೆ ಪ್ರತಿ ಮೂರು ತಿಂಗಳಲ್ಲೊಮ್ಮೆ ಸಭೆ ನಡೆಸಿ ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲುಸರಕಾರ ಸೂಚನೆ ಹೊರಡಿಸಿದೆ.
ಅದೇವೇಳೆ ರಾಜ್ಯದಲ್ಲಿ ತಮಿಳ್, ಕನ್ನಡ ಭಾಷೆಗಳ ಅಲ್ಪಸಂಖ್ಯಾತರಿಗೆ ಈಗಾಗಲೇ ಇರುವ ವಿನಾಯಿತಿ ಮುಂದುವರಿಯುತ್ತದೆ. ಕೇಂದ್ರ ಸರಕಾರ, ಕೇಂದ್ರಸರಕಾರಿ ಸಂಸ್ಥೆಗಳು, ಹೈಕೋರ್ಟು, ಸುಪ್ರೀಂಕೋರ್ಟು, ಹೊರರಾಜ್ಯಗಳು, ತಮಿಳ್, ಕನ್ನಡ ಮುಂತಾದ ಹೊರರಾಜ್ಯ ಭಾಷಾ ಅಲ್ಪಸಂಖ್ಯಾತರೊಂದಿಗೆ ಪತ್ರ ವ್ಯವಹಾರಕ್ಕೆ ಮಾತ್ರ ಇಂಗ್ಲಿಷ್ ಬಳಕೆಮಾಡಬಹುದು.