ಆತ್ಮವಿಶ್ವಾಸ ಮತ್ತು ದೃಢ ಸಂಕಲ್ಪಕ್ಕೆ ಬರವಿಲ್ಲ: 180 ಬಾವಿಗಳನ್ನು ತೋಡಿದ ಕೇರಳದ ಮಹಿಳೆಯರು !

ಒತ್ತಪಲಂ, ಮೇ 1: ಕೇರಳದ ಪಾಲಕ್ಕಾಡ್ ಜಿಲ್ಲೆಯ ಪೂಕೊಟ್ಟುಕಾವು ಗ್ರಾಮವು ಸತತ ಬರಗಾಲದಿಂದ ಕಂಗಾಲಾಗಿದೆ. ನೀರಿಗಾಗಿ ಹಲವು ವರ್ಷಗಳಿಂದ ಹಪಹಪಿಸಿದೆ. ಆದರೆ ಬರಗಾಲ ಈ ಗ್ರಾಮದ ಕೆಲ ಮಹಿಳೆಯರನ್ನು ಕಂಗೆಡಿಸಿಲ್ಲ. ಇಲ್ಲಿ ಹಸಿವಿದ್ದರೂ ದಾಹ ತಣಿಸಲು ನೀರಿನ ಕೊರತೆಯಿಲ್ಲ. ಇದಕ್ಕೆ ಕಾರಣ ಈ ಗ್ರಾಮದ ಒತ್ತಪಲಂ ಬ್ಲಾಕ್ ನ ಕೆಲ ಗಟ್ಟಿಗಿತ್ತಿಯರು. ಕಳೆದ ಅಕ್ಟೋಬರ್ ತಿಂಗಳಿನಿಂದ ಅವರು ಹಾರೆ ಪಿಕ್ಕಾಸುಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು ಬಾವಿ ತೋಡಲು ಆರಂಭಿಸಿದ್ದರು. ಇಲ್ಲಿಯ ತನಕ ಅವರು 180 ಬಾವಿಗಳನ್ನು ತೋಡಿದ್ದಾರೆ. ಪ್ರತಿ ದಿನ ನೀರು ತರಲು ಕೆಲವು ಕಿಲೋಮೀಟರ್ ದೂರದವರೆಗೆ ನಡೆದುಕೊಂಡು ಹೋಗಬೇಕಿದ್ದ ಈ ಗ್ರಾಮದ ಮಹಿಳೆಯರು ಇದೀಗ ತಮ್ಮ ಗ್ರಾಮದಲ್ಲಿಯೇ ಇರುವ ಬಾವಿಗಳಿಂದ ಶುದ್ಧ ನೀರು ಪಡೆಯುತ್ತಿದ್ದಾರೆ.
ಈ ಮಹಿಳೆಯರ ಸಾಹಸವನ್ನು ಮೆಚ್ಚಲೇ ಬೇಕು. ಪುರುಷರಿಗಿಂತ ತಾವೇನು ಕಡಿಮೆಯಿಲ್ಲವೆಂಬಂತೆ ಇವರು ಬಣ್ಣ ಬಣ್ಣದ ಲುಂಗಿ ಹಾಗೂ ಶರ್ಟ್ ಧರಿಸಿ ಬಾವಿ ತೋಡುವ ಕಾರ್ಯದಲ್ಲಿ ನಿರತರಾಗುತ್ತಾರೆ. ಈ ಗ್ರಾಮದ ಕನಿಷ್ಠ 300 ಮಹಿಳೆಯರು ಈ ಕಾಯಕದಲ್ಲಿ ತೊಡಗಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ವಯ ವೇತನ ಗಳಿಸುತ್ತಾರೆ.
‘‘ಕಳೆದ ವರ್ಷ ನಾವು ನಮ್ಮ ಬಾವಿ ತೋಡುವ ಕೆಲಸ ಆರಂಭಿಸಿದಾಗ ಹಲವರಿಗೆ ಈ ಬಗ್ಗೆ ಯಾವುದೇ ಜ್ಞಾನವಿರಲಿಲ್ಲ. ಆದರೆ ಸ್ವಲ್ಪವೇ ಸಮಯದಲ್ಲಿ ಅವರು ಪರಿಣತರಾಗಿ ಬಿಟ್ಟಿದ್ದಾರೆ,’’ ಎನ್ನುತ್ತಾರೆ ಸ್ಥಳೀಯ ಪಂಚಾಯತ್ ಅಧ್ಯಕ್ಷ ಕೆ ಜಯದೇವನ್.
ಈ ಮಹಿಳೆಯರೇನು ಉಚಿತವಾಗಿ ಕೆಲಸ ಮಾಡುತ್ತಿಲ್ಲವಾದರೂ ಸಾಮಾನ್ಯವಾಗಿ ಒಂದು ಬಾವಿ ತೋಡಲು ರೂ 60,000 ವೆಚ್ಚ ತಗಲುವುದಾದರೆ ಇವರ ಬಾವಿಯ ವೆಚ್ಚ ಅದರ ಅರ್ಧದಷ್ಟಾಗುವುದು. ‘‘ಸರಕಾರಿ ಹಣವನ್ನು ಅತ್ಯುತ್ತಮವಾಗಿ ಹೇಗೆ ಉಪಯೋಗಿಸಬಹುದೆಂದು ಈ ಮಹಿಳೆಯರು ತಮ್ಮ ಕಾರ್ಯದ ಮೂಲಕ ಸಾಧಿಸಿ ತೋರಿಸಿದ್ದಾರೆ. ಮಳೆ ಕೈಕೊಟ್ಟಾಗ ಈ ಮಹಿಳೆಯರು ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಆಪತ್ಬಾಂಧವರಾದರು,’’ ಎನ್ನುತ್ತಾರೆ ಪಾಲಕ್ಕಾಡ್ ಸಂಸದ ಎಂ ಬಿ ರಾಜೇಶ್.








