ವರದಕ್ಷಿಣೆಗೆ ಒತ್ತಾಯಿಸಿ ಒತ್ತೆಯಾಳಾದ ಮದುಮಗ

ಪಲ್ವಾಲ್(ಹರ್ಯಾಣ),ಮೇ 1: ವರದಕ್ಷಿಣೆ ಬೇಡಿಕೆಯಿಟ್ಟಿದ್ದ ಮದುಮಗ ಮತ್ತು ಆತನ ಸೋದರನನ್ನು ಮದುಮಗಳ ಕುಟುಂಬದವರು ಒತ್ತೆಯಾಳಾಗಿಟ್ಟುಕೊಂಡ ಮತ್ತು ದಂಡದ ರೂಪದಲ್ಲಿ ಮದುಮಗಳ ಹೆಸರಿಗೆ ಜಾಗವೊಂದನ್ನು ಬರೆದುಕೊಡುವಂತೆ ಸ್ಥಳೀಯ ಪಂಚಾಯತಿಯು ಮದುಮಗನಿಗೆ ತಾಕೀತು ಮಾಡಿದ ಘಟನೆ ಇಲ್ಲಿ ನಡೆದಿದೆ.
ಮದುಮಗನ ಕುಟುಂಬವು ಇನ್ನೂ ಜಾಗವನ್ನು ಮದುಮಗಳ ಹೆಸರಿಗೆ ಮಾಡಿಲ್ಲವಾದ್ದರಿಂದ ಆಕೆ ಇನ್ನೂ ತನ್ನ ಹೊಸ ಮನೆಗೆ ಹೋಗಿಲ್ಲ. ಶನಿವಾರ ಈ ಘಟನೆ ನಡೆದಿದೆ. ರಾಜಸ್ಥಾನದ ಭರತಪುರ ನಿವಾಸಿಯಾದ ಮದುಮಗ ಫರೀದ್ ಕುರೇಷಿ ಹೆಚ್ಚಿನ ವರದಕ್ಷಿಣೆಗೆ ಆಗ್ರಹಿಸಿದ್ದಲ್ಲದೆ, ಮದುಮಗಳ ಕುಟುಂಬದ ಕುರಿತು ಕೆಲವು ಟೀಕೆಗಳನ್ನೂ ಮಾಡಿದ್ದ. ಇದರಿಂದ ಕೆರಳಿದ ಮದುಮಗಳ ಕುಟುಂಬ ಸದಸ್ಯರು ಮದುಮಗ ಮತ್ತು ಆತನ ಸೋದರ ಸೇರಿದಂತೆ ನಾಲ್ವರನ್ನು ಒಂದು ಕೋಣೆಯೊಳಗೆ ಕೂಡಿ ಹಾಕಿದ್ದರು.
ಇಷ್ಟಾದ ಬಳಿಕ ಪಂಚಾಯತಿ ಸಭೆ ಸೇರಿದ್ದು, ಮದುಮಗಳ ಹೆಸರಿಗೆ ನಾಲ್ಕು ಬಿಘಾ ಜಮೀನನ್ನು ವರ್ಗಾಯಿಸುವಂತೆ ಮದುಮಗನ ಕುಟುಂಬಕ್ಕೆ ಪಂಚಾಯತಿಯು ತಾಕೀತು ಮಾಡಿದೆ. ಇಲ್ಲದಿದ್ದರೆ ಮದುಮಗಳನ್ನು ಕುರೇಷಿಯ ಮನೆಗೆ ಹೋಗಲು ಅವಕಾಶ ನೀಡುವುದಿಲ್ಲವೆಂದು ಅದು ಸ್ಪಷ್ಟಪಡಿಸಿದೆ.
ರವಿವಾರ ಸರಕಾರಿ ಕಚೇರಿಗಳಿಗೆ ರಜೆಯಿದ್ದರಿಂದ ಜಾಗ ಮದುಮಗಳ ಹೆಸರಿಗೆ ವರ್ಗಾವಣೆಯಾಗುವವರೆಗೆ ಭದ್ರತೆಯಾಗಿ 10 ಲ.ರೂ.ಗಳನ್ನು ಪಂಚಾಯತಿಯಲ್ಲಿ ಠೇವಣಿ ಇಡುವಂತೆಯೂ ಕುರೇಶಿಗೆ ಸಭೆಯು ಆದೇಶಿಸಿತ್ತು.
ವಿವಾದ ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿದ್ದು, ಎರಡೂ ಕುಟುಂಬಗಳು ವಿವಾದವನ್ನು ಬಗೆಹರಿಸಿಕೊಳ್ಳಲು ಮಾತುಕತೆ ನಡೆಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.