ಬಿಕ್ಕಟ್ಟಿನ ಜಂಜಾಟಕ್ಕೆ ನನ್ನನ್ನು ಎಳೆಯಬೇಡಿ, ಬಿಜೆಪಿಗೆ ನಾನಿನ್ನೂ ಹೊಸಬ: ಎಸ್.ಎಂ.ಕೃಷ್ಣ
ಬೆಂಗಳೂರು, ಮೇ 1: "ರಾಜ್ಯ ಬಿಜೆಪಿಯಲ್ಲಿ ಪ್ರಸ್ತುತ ಸೃಷ್ಟಿಯಾಗಿರುವ ಬಿಕ್ಕಟ್ಟಿನಲ್ಲಿ ನನ್ನನ್ನು ಯಾವುದೇ ಕಾರಣಕ್ಕೂ ಎಳೆಯಬೇಡಿ. ನಾನು ಬಿಜೆಪಿಗೆ ಇನ್ನೂ ಹೊಸಬ" ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ಸದಾಶಿವನಗರದಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, "ಬಿಜೆಪಿಗೆ ತಾನು ಹೊಸದಾಗಿ ಸೇರ್ಪಡೆಯಾಗಿದ್ದು, ಪಕ್ಷದ ಕಾರ್ಯಕರ್ತನಾಗಿದ್ದೇನೆ. ಬೆಕ್ಕಿಗೆ ಗಂಟೆ ಕಟ್ಟುವ ಕೆಲಸ ನನ್ನದಲ್ಲ" ಎಂದರು.
"ವಿದ್ಯಾರ್ಥಿ ಜೀವನದಲ್ಲಿ ಕಾಲೇಜುಗಳಲ್ಲಿ ಹೊಸಬರು, ಹಳಬರು ಇರುವಂತೆ ಬಿಜೆಪಿಯಲ್ಲಿಯೂ ನಾನು ಹೊಸಬ. ನನ್ನ ಕೈಯಲ್ಲಿ ಬೆಕ್ಕಿಗೆ ಗಂಟೆ ಕಟ್ಟಿಸುವ ಪ್ರಯತ್ನ ಮಾಡಬೇಡಿ. ಪಕ್ಷದ ಆಂತರಿಕ ಭಿನ್ನತಮಕ್ಕೆ ನನ್ನನ್ನು ಸಿಲುಕಿಸಬೇಡಿ" ಎಂದು ಪ್ರತಿಕ್ರಿಯೆ ನೀಡಿದರು.
ಮೋದಿ ಬಲಿಷ್ಟ ನಾಯಕ: ಪ್ರಧಾನಿ ಮೋದಿ ಅವರು ಬಲಿಷ್ಟ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಇಡೀ ವಿಶ್ವವೇ ಅವರ ನಾಯಕತ್ವವನ್ನು ಒಪ್ಪಿಕೊಂಡಿದೆ. ದೇಶದಲ್ಲಿ ಒಂದು ಶಕ್ತಿಶಾಲಿ ನಾಯಕತ್ವ ಸೃಷ್ಟಿಯಾಗಿದೆ ಎಂದು ಕೃಷ್ಣ ಇದೇ ವೇಳೆ ಬಣ್ಣಿಸಿದರು.