ಜಲೀಲ್ ಕರೋಪಾಡಿ ಹಂತಕರು ಸಂಘಪರಿವಾರಕ್ಕೆ ಸೇರಿದವರು: ಸಚಿವ ರೈ

ಮಂಗಳೂರು, ಮೇ 1: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್ ಹತ್ಯೆ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದ ಆರೋಪಿಗಳಲ್ಲಿ ಹೆಚ್ಚಿನವರು ಸಂಘಪರಿವಾರಕ್ಕೆ ಸೇರಿದವರು ಎಂದು ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲೀಲ್ ಸಾಮಾಜಿಕ ಕಾಳಜಿಯನ್ನು ಹೊಂದಿರುವ ಜನಪ್ರತಿನಿಧಿ. ಜಾತಿ, ಧರ್ಮ ಮತ್ತು ಭಾಷೆಯನ್ನು ಮೀರಿದವರು. ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಹೆಚ್ಚಿನರು ಸಂಘಪರಿವಾರಕ್ಕೆ ಸೇರಿದವರು. ಕೊಲೆಯ ಹಿಂದೆ ಜಿಲ್ಲೆಯ ಸಾಮರಸ್ಯವನ್ನು ಹಾಳು ಮಾಡುವ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.
ಪ್ರಕರಣದಲ್ಲಿ ಇನ್ನೂ ಕೆಲವರು ಶಾಮೀಲಾಗಿರುವ ಗುಮಾನಿ ಇದ್ದು, ಈ ಬಗ್ಗೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಕಾರ್ತಿಕ್ ಹತ್ಯೆಗೆ ಮತೀಯ ಬಣ್ಣ ಹಚ್ಚುವ ಪ್ರಯತ್ನ
ಕಾರ್ತಿಕ್‌ರಾಜ್ ಕೊಲೆ ಪ್ರಕರಣಕ್ಕೆ ಬಿಜೆಪಿ ಮತೀಯ ಬಣ್ಣ ನೀಡಲು ಪ್ರಯತ್ನಿಸಿತ್ತು. ಮತೀಯ ಸೂಕ್ಷ್ಮ ಜಿಲ್ಲೆಯಾದ ದ.ಕ.ದಲ್ಲಿ ಇಂತಹ ಪ್ರಕರಣದಲ್ಲಿ ರಾಜಕೀಯ ಮಾಡವುದು ಸರಿಯಲ್ಲ. ಬಿಜೆಪಿಯ ಹಿರಿಯ ಮುಖಂಡರು ಈ ಬಗ್ಗೆ ಆಧಾರ ರಹಿತವಾದ ಹೇಳಿಕೆಗಳನ್ನು ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಯು ಸಮಾಜದಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಇದೀಗ ಪೊಲೀಸರು ನೈಜ ಆರೋಪಿಗಳನ್ನು ಬಂಧಿಸುವ ಮೂಲಕ ಸಾಮಾಜಿಕ ಆತಂಕವನ್ನು ದೂರ ಮಾಡಿದ್ದಾರೆ ಎಂದು ಸಚಿವ ರಮಾನಾಥ ರೈ ಹೇಳಿದರು.
ಪೊಲೀಸರಿಗೆ ಅಭಿನಂದನೆ
ಕರೋಪಾಡಿ ಅಬ್ದುಲ್ ಜಲೀಲ್ ಮತ್ತು ಕಾರ್ತಿಕ್ ರಾಜ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ನೈಜ ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ಕಾರ್ಯಾಚರಣೆಗೆ ಅಭಿನಂದನೆ ಸಲ್ಲಿಸುವುದಾಗಿ ಸಚಿವರು ಹೇಳಿದರು.
ಗೃಹ ಸಚಿವರು ಮಂಗಳೂರಿಗೆ
ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಂಗಳವಾರ ಮಂಗಳೂರಿಗೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಕರೋಪಾಡಿಗೆ ಭೇಟಿ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೇಯರ್ ಕವಿತಾ ಸನಿಲ್, ಉಪ ಮೇಯರ್ ರಜನೀಶ್, ಮನಪಾ ಸದಸ್ಯ ಶಶಿಧರ ಹೆಗ್ಡೆ, ಕೋಡಿಜಾಲ್ ಇಬ್ರಾಹೀಂ ಮೊದಲಾದವರು ಉಪಸ್ಥಿತರಿದ್ದರು.