ಶ್ರೀಮಂತರ ಪರ ಟೊಂಕ ಕಟ್ಟಿ ನಿಂತ ಪ್ರಧಾನಿ ಮೋದಿ: ಎಚ್.ಎಸ್.ದೊರೆಸ್ವಾಮಿ

ಬೆಂಗಳೂರು, ಮೇ 1: ಪ್ರಧಾನಿ ನರೇಂದ್ರ ಮೋದಿ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದರೂ ಬಡವರು ಬಡವರಾಗಿಯೇ ಉಳಿದಿದ್ದಾರೆ. ಅವರನ್ನು ಮೇಲೆತ್ತುವ ಯಾವುದೇ ಕೆಲಸ ಆಗುತ್ತಿಲ್ಲ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದ್ದಾರೆ.
ಸೋಮವಾರ ಇಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ಮೋದಿ ಬಡವರನ್ನು ಮೇಲೆತ್ತುವ ಯಾವುದೇ ಕಾರ್ಯಕ್ರಮಗಳನ್ನು ಹಾಕಿಕೊಂಡಿಲ್ಲ. ಬದಲಾಗಿ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡಲು ಟೊಂಕ ಕಟ್ಟಿ ನಿಂತಿರುವುದು ವಿಪರ್ಯಾಸ ಎಂದು ವಿಷಾದ ವ್ಯಕ್ತಪಡಿಸಿದರು.
ರಾಜಕಾರಣಿಗಳಿಗೆ ಓಟು ಹಾಕಿದ ತಪ್ಪಿಗೆ ಬಡವರು ಬಡವರಾಗಿಯೇ ಉಳಿಯಬೇಕಾ ಎಂದು ಪ್ರಶ್ನಿಸಿದ ಅವರು, ಕೇಂದ್ರದಲ್ಲಿ ಹೊಸ ಲೋಕಪಾಲ್ ಮಸೂದೆಯನ್ನು ಕಾಟಾಚಾರಕ್ಕೆ ಜಾರಿಗೆ ತರಲಾಗಿದೆ. ಇನ್ನೂ ಲೋಕಪಾಲರನ್ನು ನೇಮಕ ಮಾಡಿಲ್ಲ. ಕರ್ನಾಟಕ ರಾಜ್ಯ ಭ್ರಷ್ಟಾಚಾರದಲ್ಲಿ ದೇಶದಲ್ಲೆ ಮುಂಚೂಣಿಯಲ್ಲಿದೆ ಎನ್ನುವ ವರದಿ ಇತ್ತೀಚೆಗೆ ಕೇಳಿ ಬಂದಿದೆ. ಅಧಿಕಾರಶಾಹಿಯೇ ಇಂತಹ ದುಸ್ಥಿತಿಗೆ ಕಾರಣ. ಅಧಿಕಾರಿಶಾಹಿಗಳು ಶಾಸಕರು, ಮಂತ್ರಿಗಳ ಜೊತೆ ಕೈಜೋಡಿಸುವುದನ್ನು ಎಲ್ಲಿಯವರೆಗೂ ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ಇದೇ ಪರಿಸ್ಥಿತಿ ಎಂದರು.
ದೇವೇಗೌಡ ಸಿಎಂ ಆಗಿದ್ದ ಕಾಲದಲ್ಲಿ ಗಾಂಧಿ ಸಂಪುಟವನ್ನು ಹೊರ ತರುವ ಕೆಲಸ ನಡೆದಿತ್ತು. ಅದು ಅರ್ಧಕ್ಕೆ ನಿಂತಿ ಹೋಗಿದೆ. ರಾಜ್ಯ ಸರಕಾರ ಈಗಲಾದರೂ ಅದಕ್ಕೆ ಧನ ಸಹಾಯ ಮಾಡಿ 100 ಸಂಪುಟಗಳು ಹೊರ ತರುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
‘ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯಂತಹವರು ಸಮಾಜದಲ್ಲಿ ಹೆಚ್ಚು-ಹೆಚ್ಚು ಬರಬೇಕು. ಅನ್ಯಾಯದ ವಿರುದ್ಧ ಹೋರಾಟ ಮಾಡುವ ಅವರ ತಾಳ್ಮೆ ನಮಗೆಲ್ಲ ಪ್ರೇರಣೆ ಮತ್ತು ಸ್ಫೂರ್ತಿ’
-ಎನ್.ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ







