ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಬಹಿರಂಗ ಸಭೆ

ವಿಟ್ಲ, ಮೇ 1: ಹೋರಾಟದ ಮೂಲಕ ಕಾರ್ಮಿಕರು ಪಡೆದಂತಹ ಹಕ್ಕುಗಳನ್ನು ಕಸಿದುಕೊಳ್ಳಲು ಇಂದು ಸರಕಾರಗಳು ಪ್ರಯತ್ನಿಸುತ್ತಿವೆ. ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿರುವ ಸರಕಾರಗಳು ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೋಳಿಸುವ ಮೂಲಕ ಬಂಡವಾಳಶಾಹಿಗಳ ಹಿತ ಕಾಯುತ್ತಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಕಾಮ್ರೆಡ್ ವರಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ದಿನಾಚರಣೆ ಪ್ರಯುಕ್ತ ಸಿಐಟಿಯು ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಬಂಟ್ವಾಳ-ಬಡ್ಡಕಟ್ಟೆಯಲ್ಲಿ ನಡೆದ ಕಾರ್ಮಿಕ ದಿನಾಚರಣೆಯ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮೇ 1 ಕಾರ್ಮಿಕರ ದಿನವಾಗಿ ಗುರುತಿಸಲು ಹಲವು ಮಂದಿ ಹುತಾತ್ಮರಾಗಿದ್ದು, ಅವರನ್ನು ಸ್ಮರಿಸಿಕೊಳ್ಳುವುದು ಈ ದಿನ ಪ್ರತೀಯೋರ್ವ ಕಾರ್ಮಿಕರಿಗೂ ಅತೀ ಅಗತ್ಯವಾಗಿದೆ ಎಂದರು.
ಕಾರ್ಮಿಕರ ಬದುಕಿನಲ್ಲಿ ಬದಲಾವಣೆಯಾಗಬೇಕಾದರೆ ಅದು ಕೇವಲ ಹೋರಾಟದಿಂದ ಮಾತ್ರ ಹೊರತು ಮತ ನೀಡುವುದರಿಂದ ಸಾಧ್ಯವಿಲ್ಲ. ದೇಶ ಪ್ರೇಮದ ಹೆಸರಿನಲ್ಲಿ ಜಾತಿ-ಧರ್ಮಗಳ ಹೆಸರಿನಲ್ಲಿ ಕಾರ್ಮಿಕ ವರ್ಗದ ಐಕ್ಯತೆಯನ್ನು ಇಂದು ಒಡೆಯಲಾಗುತ್ತಿದ್ದು, ಇದರ ವಿರುದ್ಧ ಕಾಮಿಕ ಸಮೂಹ ಒಗ್ಗಟ್ಟಾಗಿ ಜಾಗೃತರಾಗಬೇಕಿದೆ. ಕೇಂದ್ರದ ನರೇಂದ್ರ ಮೋದಿ ಸರಕಾರವು ಅಚ್ಚೇ ದಿನ್ ಹೆಸರಿನಲ್ಲಿ ಜನರ ಬದುಕನ್ನೇ ನಿರ್ನಾಮ ಮಾಡಲು ಹೊರಟಿದೆ ಎಂದು ಆರೋಪಿಸಿದ ವರಲಕ್ಷ್ಮಿ, ಮಂತ್ರಿಗಳ ಕಾರಿನ ಕೆಂಪು ದೀಪಗಳನ್ನು ತೆಗೆದು ಹಾಕಿದ ಕೂಡಲೇ ಜನರ ಸಂಕಷ್ಟಗಳು ದೂರವಾಗುತ್ತದೆಯೇ ಎಂದು ಪ್ರಶ್ನಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಹಿರಿಯ ಕಾರ್ಮಿಕ ಮುಖಂಡರಾದ ಬಿ. ವಾಸುಗಟ್ಟಿ, ಸಂಜೀವ ಬಂಗೇರ, ಮೋನಪ್ಪ ಸಪಲ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಿಐಟಿಯು ಬಂಟ್ವಾಳ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ, ಮುಖಂಡರಾದ ಜಯಂತಿ ಶೆಟ್ಟಿ, ಲೋಲಾಕ್ಷಿ, ರಾಮಕೃಷ್ಣ ಬಿ, ಉದಯ ಕುಮಾರ್ ಮೊದಲಾದವರು ಭಾಗವಹಿಸಿದ್ದರು. ಇದಕ್ಕೂ ಮೊದಲು ಬಂಟ್ವಾಳ ಮಹಾಲಿಂಗೇಶ್ವರ ದೇವಸ್ಥಾನ ಬಳಿಯಿಂದ ಕಾರ್ಮಿಕ ಮೆರವಣಿಗೆ ಸಾಗಿ ಬಂತು.







