ಮೂಡಿಗೆರೆ ಪಟ್ಟಣದಲ್ಲಿ ಕ್ರಿಕೆಟ್ ಬೆಟ್ಟಿಂಗ್: ನಾಲ್ವರು ಆರೋಪಿಗಳ ಬಂಧನ

ಚಿಕ್ಕಮಗಳೂರು, ಮೇ.1: ಮೂಡಿಗೆರೆ ಪಟ್ಟಣದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಸಂಬಂಧ ಓರ್ವ ಅಪ್ರಾಪ್ತ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂದಿಸಿದ್ದು, ಆರೋಪಿಗಳಿಂದ 7,35,740 ರೂ. ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಮೂಡಿಗೆರೆ ಪಟ್ಟಣದ ಎಂಜಿ ರಸ್ತೆಯ ದಲ್ಲಾರಾವ್(34), ಕುನ್ನಳ್ಳಿ ಗ್ರಾಮದ ಸೀತಾನ್(27), ಬಾಬುಲಾಲ್(30) ಎಂದು ಗುರುತಿಸಲಾಗಿದೆ. ಅಪ್ರಾಪ್ತ ಆರೋಪಿಯ ಹೆಸರನ್ನು ಗೌಪ್ಯವಾಗಿಡಲಾಗಿದೆ.
ಮೂಡಿಗೆರೆ ಎಂ.ಜಿ ರಸ್ತೆಯಲ್ಲಿರುವ ಸತೀಶ್ ಪಟೇಲ್ ಮಾಲಕತ್ವದ ರಾಮ್ದೇವ್ ಗಾರ್ಮೆಂಟ್ಸ್ ಆ್ಯಂಡ್ ಸಾರಿ ಸೆಂಟರ್ ನಲ್ಲಿ ಟಿ-20 ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪಿಎಸ್‌ಐ ರಫೀಕ್ ನೇತೃತ್ವದ ಪೊಲೀಸ್ ತಂಡವು ಸ್ಥಳಕ್ಕೆ ಅಂಗಡಿ ಮೇಲೆ ದಾಳಿ ನಡೆಸಿತ್ತು. ಈ ಸಮಯದಲ್ಲಿ ಅಂಗಡಿಯಲ್ಲಿ 5 ಮಂದಿ ಇದ್ದು, ಅದರಲ್ಲಿ 3 ಜನರು ಓಡಿ ಹೋಗಿದ್ದಾರೆ.
ಸ್ಥಳದಲ್ಲಿ ಸೆರೆ ಸಿಕ್ಕ ಇಬ್ಬರನ್ನು ವಿಚಾರಿಸಿದಾಗ ಓರ್ವ ವ್ಯಕ್ತಿಯ ಬಳಿ ರೂ. 40 ಸಾವಿರ ರೂ. ಹಣವಿತ್ತು. ಅದು ಕ್ರಿಕೆಟ್ ಬೆಟ್ಟಿಂಗ್ ಕಟ್ಟಿ ಜೂಜಾಟ ಆಡಲು ಹಣ ತಂದಿರುವುದಾಗಿ ಆತ ಸ್ಥಳದಲ್ಲಿಯೇ ಒಪ್ಪಿಕೊಂಡಿದ್ದ. ಅದನ್ನು ವಶಕ್ಕೆ ಪಡೆದದ ಪೊಲೀಸರ ತಂಡವು ಬಿಲ್ಡಿಂಗ್‌ನ ಮೇಲ್ಭಾಗದಲ್ಲಿ ಬೆಟ್ಟಿಂಗ್‌ನಲ್ಲಿ ನಿರತವಾಗಿದ್ದ ಇಬ್ಬರನ್ನು ವಶಕ್ಕೆ ಪಡೆದು ಮೊಬೈಲ್‌ನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಗಳು ತಾವು ಜೂಜಾಟವನ್ನು ಮೊಬೈಲ್ ಮೂಲಕ ಆಡುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದರು.
7,35,740 ರೂ., 3 ಮೊಬೈಲ್ ಫೋನ್, ಪಂದ್ಯಾಟವನ್ನು ವೀಕ್ಷಣೆ ಮಾಡುತ್ತಿದ್ದ ಒಂದು ಟಿ.ವಿ., ಡಿ.ವಿ.ಆರ್., ರಿಮೋಟ್‌ಗಳು ಹಾಗೂ ನಾಲ್ಕು ಬ್ಯಾಂಕ್ ಪಾಸ್ ಬುಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಮೇಲೆ ಮೂಡಿಗೆರೆ ಪೊಲೀಸ್ ಠಾಣಾ ಮೊ. ನಂ. 93/17 ಪ್ರಕರಣ ದಾಖಲಿಸಲಾಗಿದೆ.
ಕ್ರಿಕೇಟ್ ಬೆಟ್ಟಿಂಗ್ ದಂಧೆಯ ಮೇಲೆ ಯಶಸ್ವಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿರುವ ಪಿಎಸ್‌ಐ ರಫೀಕ್ ಎಂ. ಮತ್ತು ಪೊಲೀಸ್ ಸಿಬ್ಬಂದಿಯಾದ ಅಶೋಕ್, ತಿಮ್ಮಪ್ಪ, ದಯಾನಂದ, ಉಮೇಶ, ಶಿವಕುಮಾರ್, ರವೀಂದ್ರ, ಸುಜಾತಾ, ಸುಷ್ಮಾ ಮತ್ತು ಜಯಕುಮಾರ್ ರನ್ನು ಎಸ್ಪಿ ಕೆ.ಅಣ್ಣಾಮಲೈ ಶ್ಲಾಘಿಸಿದ್ದಾರೆ.







