"ಕೇಂದ್ರ ಸರಕಾರ ಸಮರ್ಪಕ ಕಾರ್ಮಿಕ ನೀತಿಯನ್ನು ಪ್ರಕಟಿಸಿಲ್ಲ"
.gif)
ಸಾಗರ, ಮೇ 1: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಈತನಕ ಸಮರ್ಪಕವಾದ ಕಾರ್ಮಿಕ ನೀತಿಯನ್ನು ಪ್ರಕಟಿಸಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ದೂರಿದ್ದಾರೆ.
ಇಲ್ಲಿನ ಗಾಂಧಿಮಂದಿರದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.
ಕಾರ್ಮಿಕರ ಶ್ರೇಯೋಭಿವೃದ್ದಿಗೆ ಹಣ ಬಂದಿದೆ. ಆದರೆ ನಿಯಮಾವಳಿ ಪ್ರಕಾರ ಸೂಕ್ತ ನೀತಿ ಅನುಷ್ಟಾನವಾಗದೆ ಇರುವುದರಿಂದ ಖರ್ಚು ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರ ಸ್ಥಿತಿಗತಿ ಸುಧಾರಿಸುವ ಸಮರ್ಪಕ ಕಾಯ್ದೆ ಅನುಷ್ಟಾನಕ್ಕೆ ಕಾಂಗ್ರೆಸ್ ಪಕ್ಷ ಹೋರಾಟ ರೂಪಿಸುವ ಚಿಂತನೆ ನಡೆಸಿದೆ ಎಂದರು.
ಕೇವಲ ಕಟ್ಟಡ ಕಾರ್ಮಿಕರದ್ದೇ 4,500 ಕೋಟಿ ರೂ. ಸೆಸ್ ಸಂಗ್ರಹವಾಗಿದೆ. ಈ ಹಣದಲ್ಲಿ ಮನೆ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸ, ಜೀವನ ಭದ್ರತೆಯಂತಹ ಸೌಲಭ್ಯಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಆದರೆ ಕಟ್ಟಡ ಕಾರ್ಮಿಕರು ತಮ್ಮ ಹೆಸರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳದೆ ಇರುವುದರಿಂದ ಅವರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಕಾಂಗ್ರೆಸ್‌ನ ಕಾರ್ಮಿಕ ವಿಭಾಗವು ಅಸಂಘಟಿತ ಕಾರ್ಮಿಕರು ಸರ್ಕಾರ ಸೌಲಭ್ಯ ಪಡೆಯುವಂತೆ ಅಗತ್ಯ ಅರಿವು ಮೂಡಿಸಬೇಕು ಎಂದರು.
ತಾಲ್ಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಪ್ರಸ್ತುತ ಬೆಲೆ ಏರಿಕೆ ಪರಿಸ್ಥಿತಿಯಲ್ಲಿ ವಾಸ್ತವಾಂಶದ ದುಡಿಮೆ ಕಾರ್ಮಿಕರ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಒಂದು ಕಡೆ ಬಡತನ ಜಾಸ್ತಿಯಾಗುತ್ತಿದ್ದರೆ, ಇನ್ನೊಂದು ಕಡೆ ಶ್ರೀಮಂತರು ಜಾಸ್ತಿಯಾಗುತ್ತಿದ್ದಾರೆ. ಬಡವರನ್ನು ಶೋಷಿಸಿ, ಶ್ರೀಮಂತರಾಗಿ ಮೆರೆಯುವವರ ಸಂಖ್ಯೆ ಹೆಚ್ಚುತ್ತಿದೆ. ಕೇಂದ್ರ ಸರ್ಕಾರ ಅಂಬಾನಿ, ಅದಾನಿ ಅಂತಹವರ ಸಾಲಮನ್ನಾ ಮಾಡಿದೆ. ವಿಜಯ ಮಲ್ಯ ಅವರ 2 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಲು ಸಿದ್ದವಿದೆ. ಆದರೆ ಬಡ ರೈತರ ಸಾಲಮನ್ನಾ ಮಾಡಲು ಕೇಂದ್ರಕ್ಕೆ ಮನಸ್ಸಿಲ್ಲ. ಕಾರ್ಮಿಕರು, ರೈತರು ಸಮಸ್ಯೆಯಲ್ಲಿದ್ದರೆ ದೇಶ ಅಭಿವೃದ್ದಿ ಹೊಂದುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಾದ ದುರ್ಗಮ್ಮ, ಜ್ಯೋತಿ ಪ್ರಕಾಶ್, ಅಬ್ದುಲ್ ಮುನಾಫ್, ಕೆರೆಯಪ್ಪ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹ್ಮದ್ ಖಾಸಿಂ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗಣಪತಿ ಹೆನಗೆರೆ, ಕಾರ್ಮಿಕ ಘಟಕದ ಅಧ್ಯಕ್ಷ ಕೆ.ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಪರಿಶಿಷ್ಟ ವಿಭಾಗದ ಅಧ್ಯಕ್ಷ ಎಲ್.ಚಂದ್ರಪ್ಪ, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಜಿ.ಕೆ.ಭೈರಪ್ಪ, ಸೋಮಶೇಖರ್, ನಗರಸಭೆ ಸದಸ್ಯರಾದ ಸುಂದರಸಿಂಗ್, ಉಮೇಶ್, ಗಣಾಧೀಶ್, ಶ್ರೀನಾಥ್ ಇನ್ನಿತರರು ಹಾಜರಿದ್ದರು.







