ಬಂಡವಾಳಶಾಹಿ ಪರವಾದ ಪ್ರತಿಗಾಮಿ ಕೇಂದ್ರ ಸರಕಾರ: ಕಾರ್ಮಿಕರ ಸಮಾವೇಶದಲ್ಲಿ ಶೇಷಾದ್ರಿ ಆಕ್ರೋಶ

ಮಂಡ್ಯ, ಮೇ.1: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಪ್ರತಿಗಾಮಿ ಸರಕಾರ ಬಂಡವಾಳಶಾಹಿ, ಉದ್ಯಮಿಗಳ ಪರವಾದ ಕಾನೂನುಗಳನ್ನು ವೇಗವಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಶೇಷಾದ್ರಿ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕ ದಿನದ ಅಂಗವಾಗಿ ಕರ್ನಾಟಕ ರಾಜ್ಯ ಹೊರಗುತ್ತಿಗೆ ಕಾರ್ಮಿಕರ ಒಕ್ಕೂಟದ ವತಿಯಿಂದ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ ಕಾರ್ಮಿಕರ ಸಮಾವೇಶವನ್ನು ನಗಾರಿ ಭಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ರೈತ, ಕಾರ್ಮಿಕ ವಿರೋಧಿಯಾಗಿದೆ ಎಂದು ಆರೋಪಿಸಿದರು.
ಬರದಿಂದ ಕಂಗೆಟ್ಟಿರುವ ರೈತರ ಸಾಲಮನ್ನಾ ಬಗ್ಗೆ ಮೌನವಹಿಸುವ ಪ್ರಧಾನಿ ನರೇಂದ್ರಮೋದಿ, ಗೋಮಾಂಸ ಭಕ್ಷಣೆ, ವಸ್ತ್ರ ಸಂಹಿತೆ, ಬುರ್ಖಾ ವಿಷಯಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಾರೆ. ಮತ್ತೊಂದೆಡೆ ಕಾರ್ಪೋರೇಟ್ ಉದ್ಯಮಿಗಳ ಕೋಟಿಗಟ್ಟಲೆ ಸಾಲಮನ್ನಾ ಮಾಡುತ್ತಾರೆ ಎಂದು ಅವರು ತರಾಟೆಗೆ ತೆಗೆದುಕೊಂಡರು.
ದೇಶದಲ್ಲಿ ಸುಮಾರು 45 ಕೋಟಿ ಶ್ರಮಿಕರಿದ್ದು, ಅವರಲ್ಲಿ ಕೇವಲ 5 ಕೋಟಿಯಷ್ಟು ಮಾತ್ರ ಸಂಘಟಿತ ಕಾರ್ಮಿಕರು. ಉಳಿದವರು ಕಾನೂನಿನ ವಂಚನೆ, ಆಡಳಿತ ಮಂಡಳಿ, ಗುತ್ತಿಗೆದಾರರ ಶೋಷಣೆಯಿಂದ ನರಳುತ್ತಿದ್ದಾರೆ. ಕೆಲವು ವಿಷಯಗಳಲ್ಲಿ ನ್ಯಾಯಾಲಯಗಳ ತೀರ್ಪುಗಳೂ ಕಾರ್ಮಿಕ ವಿರೋಧಿಯಾಗಿವೆ ಎಂದು ಅವರು ವಿಷಾದಿಸಿದರು.
ಉದ್ಯೋಗಾಂಕ್ಷಿಗಳ ಸಂಖ್ಯೆ ಇದ್ದರೂ ಸರಕಾರಗಳು ಉದ್ಯೋಗ ಸೃಷ್ಟಿಸುತ್ತಿಲ್ಲ. ವರ್ಷಕ್ಕೆ ಕೋಟಿ ಉದ್ಯೋಗ ಸೃಷ್ಟಿಸುತ್ತೇನೆಂದು ಭರವಸೆ ನೀಡಿದ್ದ ಬಿಜೆಪಿ ಮೂರು ವರ್ಷದಿಂದ ಕೇವಲ 4 ಲಕ್ಷ ಉದ್ಯೋಗ ಸೃಷ್ಟಿಸಿದೆ. ಕಪ್ಪುಹಣ ತರಲಿಲ್ಲ. ಅಗತ್ಯವಸ್ತುಗಳ ಬೆಲೆ ಇಳಿಸಲಿಲ್ಲ ಎಂದು ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಸರಕಾರ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದ್ದು, ಕಾರ್ಮಿಕರಿಗೆ ಮತ್ತಷ್ಟು ಕಷ್ಟಗಳು ಎದುರಾಗಲಿವೆ. ಹೋರಾಟಗಳು ರಾಜಕೀಯ ಪ್ರಜ್ಞೆ ಮೂಲಕ ನಡೆಯಬೇಕು. ಸದನದಲ್ಲಿ ಕಾರ್ಮಿಕರ ಪರವಾಗಿ ಮಾತನಾಡುವವರ ಗೆಲ್ಲಿಸಬೇಕು. ಕಾನೂನು ಹೋರಾಟದ ಜತೆಗೆ, ಸಂಘಟಿತ ಹೋರಾಟವನ್ನು ಗಟ್ಟಿಗೊಳಿಸಿದರೆ ಜಯ ಸಿಗುತ್ತೆ ಎಂದು ಶೇಷಾದ್ರಿ ಕರೆ ನೀಡಿದರು.
ಪೌರಕಾರ್ಮಿಕರ ಖಾಯಂಗೆ ಒತ್ತಾಯ:
ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ್ ಮಾತನಾಡಿ, ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ್ ಘೋಷಣೆ ಮಾಡಿದ್ದು, ಅದಕ್ಕಾಗಿ ದುಡಿಯುತ್ತಿರುವ 12 ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ಖಾಯಂಗೊಳಿಸಬೇಕು. ರಾಜ್ಯ ಸರಕಾರ ಪೌರಕಾರ್ಮಿಕರು, ವಾಟರ್‌ಮನ್‌ಗಳನ್ನು ಖಾಯಂಗೊಳಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಎಚ್‌ಕೆವಿ ಕಾಲೇಜಿನ ಉಪನ್ಯಾಸಕಿ ಶ್ರೀಲತಾ, ಕರ್ನಾಟಕ ರಾಜ್ಯ ಹೊರಗುತ್ತಿಗೆ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಜಿಲ್ಲಾಧ್ಯಕ್ಷ ಎನ್.ನಾಗರಾಜ್, ಕಾವೇರಿ ಕಣಿವೆ ರೈತ ಒಕ್ಕೂಟದ ಎಸ್.ಅಭಿಗೌಡ ಹನಕೆರೆ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಮಹಾಗುಣ, ವೆಂಕಟಲಕ್ಷ್ಮಿ, ಶಾಂತಕುಮಾರ್, ದೇವೇಂದ್ರ, ಚಿನ್ನರಾಜು, ಜಾನಕಿ, ಇತರರು ಉಪಸ್ಥಿತರಿದ್ದರು.
ಸಮಾವೇಶಕ್ಕೂ ಮುನ್ನ ನಗರದ ಕಾಳಿಕಾಂಬ ದೇವಾಲಯದಿಂದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ವರೆಗೆ ನಡೆದ ಮೆರವಣಿಗೆಯಲ್ಲಿ ನೂರಾರು ಪೌರಕಾರ್ಮಿಕರು ಪಾಲ್ಗೊಂಡಿದ್ದರು.







