ಎಸ್‌ಬಿಐ ಬಡ್ಡಿದರ ಕಡಿತ

ಮುಂಬೈ,ಮೇ.2: ಭಾರತೀಯ ಸ್ಟೇಟ್ ಬ್ಯಾಂಕ್, ಎಲ್ಲ ಠೇವಣಿಗಳ ಮೇಲಿನ ಬಡ್ಡಿದರವನ್ನು 50 ಮೂಲ ಅಂಶಗಳಷ್ಟು ಕಡಿಮೆ ಮಾಡಿ ಆದೇಶ ಹೊರಡಿಸಿದೆ. ಇದರಿಂದಾಗಿ 2-3 ವರ್ಷ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ಹಾಲಿ ಇರುವ 6.75 ಶೇಕಡ ಬದಲು ಶೇಕಡ 6.25 ಆಗಲಿದೆ.
ಸಹವರ್ತಿ ಬ್ಯಾಂಕ್‌ಗಳ ವಿಲೀನದ ಬಳಿಕ ಭಾರಿ ಪ್ರಮಾಣದ ಠೇವಣಿ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. ಹೊಸ ದರಗಳು ಏಪ್ರಿಲ್ 29ರಿಂದಲೇ ಜಾರಿಗೆ ಬಂದಿವೆ. ಎಲ್ಲ ಹೊಸ ಠೇವಣಿಗಳು ಹಾಗೂ ಹಳೆಠೇವಣಿಗಳ ನವೀಕರಣಕ್ಕೆ ಇದು ಅನ್ವಯವಾಗಯತ್ತದೆ. ಎಸ್‌ಬಿಐ ಗರಿಷ್ಠ ಎಂದರೆ 455 ದಿನಗಳ ಠೇವಣಿಗೆ ಶೇಕಡ 6.9ರಷ್ಟು ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರ ಠೇವಣಿಗಳ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಇರಿಸಲಾಗಿದೆ.
ಆದರೆ ಪ್ರಮುಖ ಸಾಲದ ಮೇಲಿನ ಬಡ್ಡಿದರದಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ. ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಶೇಕಡ 8ರ ದರದಲ್ಲೇ ಮುಂದುವರಿಯಲಿದೆ. ಎಸ್‌ಬಿಐ ದೇಶದ ಅತಿದೊಡ್ಡ ಬ್ಯಾಂಕ್ ಆಗಿದ್ದು, ಒಟ್ಟು ಠೇವಣಿಯ ಶೇಕಡ 25ರಷ್ಟು ಪಾಲನ್ನು ಹೊಂದಿದೆ. ಇದೀಗ ಬಡ್ಡಿದರ ಇಳಿಕೆ ಮಾಡಿರುವ ಎಸ್‌ಬಿಐ ಕ್ರಮವನ್ನು ಇತರ ಬ್ಯಾಂಕುಗಳು ಅನುಸರಿಸುವ ಸಾಧ್ಯತೆ ಹೆಚ್ಚಾಗಿದೆ.