ಆರು ಕ್ಷೇತ್ರಗಳ ಇವಿಎಂ ವಶಕ್ಕೆ ಉತ್ತರಾಖಂಡ ಹೈಕೋರ್ಟ್ ಆದೇಶ

ಡೆಹ್ರಾಡೂನ್, ಮೇ 2: ಜಿಲ್ಲೆಯ ವಿಕಾಸನಗರ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಬಳಸಿದ ಮತಯಂತ್ರಗಳನ್ನು ವಶಕ್ಕೆ ಪಡೆಯುವಂತೆ ಉತ್ತರಾಖಂಡ ಹೈಕೋರ್ಟ್ ಆದೇಶಿಸಿದ ಬೆನ್ನಲ್ಲೇ, ಮತ್ತೆ ಆರು ಕ್ಷೇತ್ರಗಳ ಮತಯಂತ್ರ ವಶಕ್ಕೆ ಪಡೆಯುವಂತೆ ಸೋಮವಾರ ಸೂಚಿಸಿದೆ. ಫೆಬ್ರವರಿ 15ರಂದು ನಡೆದ ಚುನಾವಣೆಯಲ್ಲಿ ಪರಾಜಿತರಾದ ಕಾಂಗ್ರೆಸ್ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸರ್ವೇಶ್ ಕುಮಾರ್ ಗುಪ್ತಾ ಅವರಿದ್ದ ಏಕಸದಸ್ಯ ಪೀಠ, ಭಾರತದ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗ ಹಾಗೂ ಇತರರಿಗೆ ನೋಟಿಸ್ ನೀಡಿ, ಆರು ವಾರಗಳೊಳಗೆ ಉತ್ತರಿಸುವಂತೆ ಸೂಚಿಸಿದೆ.
ಮತಯಂತ್ರಗಳನ್ನು ವಿರೂಪಗೊಳಿಸಲಾಗಿದೆ ಎಂಬ ಆರೋಪಕ್ಕೆ ಪೂರಕವಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಸಾಂದರ್ಭಿಕ ಪುರಾವೆಗಳನ್ನು ಸಲ್ಲಿಸಿದ್ದರು. ಹಲವು ಮತಗಟ್ಟೆಗಳಲ್ಲಿ ಪೂರೈಸಿದ ಮತಯಂತ್ರಗಳು ಇತರೆಡೆಗಳಲ್ಲಿ ಮತದಾನಕ್ಕೆ ಬಳಸಿದ ಯಂತ್ರಗಳಾಗಿರಲಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ರಾಜಪುರ ರಸ್ತೆ, ಬಿಎಚ್‌ಇಎಲ್ ರಾಜಪುರ, ರಾಯಪುರ, ಮುಸ್ಸೋರಿ, ಪ್ರತಾಪ್‌ನಗರ ಹಾಗೂ ಹರಿದ್ವಾರ ಗ್ರಾಮೀಣ ಕ್ಷೇತ್ರಗಳ ಇವಿಎಂ ವಶಕ್ಕೆ ಆದೇಶಿಸಲಾಗಿದೆ.
ಹರಿದ್ವಾರ ಗ್ರಾಮೀಣ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿದ್ದರು. "ಮತಗಳ ರಿಗ್ಗಿಂಗ್ ನಡೆದಿರುವುದಕ್ಕೆ ಸಾಂದರ್ಭಿಕ ಪುರಾವೆಗಳನ್ನು ಒದಗಿಸಿ, ಅರ್ಜಿ ಸಲ್ಲಿಸಿದ್ದೆವು, ಇದನ್ನು ಪರಿಗಣಿಸಿದ ಹೈಕೋರ್ಟ್, ಮತಯಂತ್ರಗಳನ್ನು ವಶಕ್ಕೆ ಪಡೆಯುವಂತೆ ಸೂಚಿಸಿದೆ" ಎಂದು ವಿಕಾಸನಗರ ಕಾಂಗ್ರೆಸ್ ಅಭ್ಯರ್ಥಿ ನವಪ್ರಭಾತ್ ಹೇಳಿದ್ದಾರೆ.
"ಚುನಾವಣೆಗೆ ಮುನ್ನ ಚುನಾವಣಾ ಅಧಿಕಾರಿ, ಕ್ಷೇತ್ರದಲ್ಲಿ ಬಳಸುವ ಎಲ್ಲ ಇವಿಎಂಗಳ ಪಟ್ಟಿಯನ್ನು ನೀಡಿದ್ದರು. ಆದರೆ ಮತಗಟ್ಟೆಗಳಿಗೆ ಸರಬರಾಜು ಮಾಡಲಾದ ಯಯಂತ್ರಗಳು ಬೇರೆಯಾಗಿದ್ದವು" ಎಂದು ಕಾಂಗ್ರೆಸ್ ಪರ ವಕೀಲ ಅವತಾರ್ ಸಿಂಗ್ ವಾದಿಸಿದ್ದರು.







