ನಾವೀಗ ಆಡಳಿತ ಪಕ್ಷ ಎಂದು ನೆನಪಿಟ್ಟುಕೊಳ್ಳಿ: ಬಿಜೆಪಿ ಕಾರ್ಯಕರ್ತರಿಗೆ ಆದಿತ್ಯನಾಥ್ ಹಿತವಚನ

ಲಕ್ನೋ, ಮೇ 2: "ಕಾನೂನು ಕೈಗೆ ತೆಗೆದುಕೊಳ್ಳಬೇಡಿ; ಯಾವುದೇ ಲೋಪಗಳು ಕಂಡರೆ ಸರಕಾರದ ಗಮನಕ್ಕೆ ತನ್ನಿ. ಅದನ್ನು ಸರಿಪಡಿಸೋಣ. ನಿಮ್ಮ ಮನೋಪ್ರವೃತ್ತಿ ಬದಲಿಸಿಕೊಳ್ಳಿ. ನಮ್ಮದು ಈಗ ಆಡಳಿತ ಪಕ್ಷ" ಉತ್ತರ ಪ್ರದೇಶದಲ್ಲಿ ಪಕ್ಷದ ಸರ್ಕಾರ ರಚನೆಯಾದ ಬಳಿಕ ನಡೆದ ಮೊಟ್ಟಮೊದಲ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಪಕ್ಷದ ಕಾರ್ಯಕರ್ತರಿಗೆ ನೀಡಿದ ಹಿತವಚನವಿದು.
ಸೋಮವಾರ ಲಕ್ನೋದಲ್ಲಿ ಆರಂಭವಾದ ಎರಡು ದಿನಗಳ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಸಿಎಂ, "ಇತರರು ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಹೇಳುವ ನಾವು ಕೂಡಾ ಅದನ್ನು ಮಾಡಬಾರದು" ಎಂದು ಬುದ್ಧಿವಾದ ಹೇಳಿದರು.
"ಯಾವುದೇ ಲೋಪಗಳಿದ್ದರೆ, ಗಮನಕ್ಕೆ ತನ್ನಿ. ಸರ್ಕಾರ ಅದನ್ನು ಸರಿಪಡಿಸುತ್ತದೆ. ನಿಮ್ಮ ಭಾವನೆಗಳಿಗೆ ನೋವಾಗಲು ಅವಕಾಶ ನೀಡುವುದಿಲ್ಲ. ಆದರೆ ನಾವು ನಮ್ಮ ಮನೋಪ್ರವೃತ್ತಿಯನ್ನೂ ಬದಲಿಸಬೇಕು. ಏಕೆಂದರೆ ನಾವೀಗ ವಿರೋಧ ಪಕ್ಷದಲ್ಲಿಲ್ಲ; ಆಡಳಿತ ಪಕ್ಷದಲ್ಲಿದ್ದೇವೆ" ಎಂದಿದ್ದಾರೆ.
ಸಹರಣಪುರ ಮತ್ತು ಆಗ್ರಾದಲ್ಲಿ ಬಜರಂಗದಳ ಕಾರ್ಯಕರ್ತರು ಪೊಲೀಸರ ಜತೆ ಸಂಘರ್ಷಕ್ಕೆ ಇಳಿದ ಘಟನೆ ಬಗ್ಗೆ ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಯೋಗಿ ಹೇಳಿಕೆಗೆ ವಿಶೇಷ ಮಹತ್ವ ಇದೆ.