ಬೆಳ್ಳಂಬೆಳಗ್ಗೆ ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ಈಶ್ವರಪ್ಪ ಧ್ಯಾನ
ಮೇ 8 ಕ್ಕೆ ರಾಯಚೂರಿನಲ್ಲಿ ಬ್ರಿಗೇಡ್ ಸಭೆ
.jpeg)
ಬೆಂಗಳೂರು, ಮೇ 2: ಸಂಕಟ ನಿವಾರಣೆಗೆ ಬೆಳ್ಳಂಬೆಳಗ್ಗೆ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀಗುರುರಾಘವೇಂದ್ರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ರಾಯರ ಬೃಂದಾವನದಲ್ಲಿ ಧ್ಯಾನ ಮಾಡಿದ ಬಳಿಕ ಮಾತನಾಡಿದ ಈಶ್ವರಪ್ಪ ಮೊದಲನಿಂದಲೂ ನಾನು ಮಂತ್ರಾಲಯಕ್ಕೆ ಭೇಟಿ ನೀಡುತ್ತಿರುವೆನು. ಇದರಲ್ಲಿ ವಿಶೇಷ ಏನು ಇಲ್ಲ ಎಂದರು.
ರಾಯಚೂರಿನಲ್ಲಿ ಮೇ 8ರಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆ ನಡೆಯಲಿದೆ ಎಂದು ಈಶ್ವರಪ್ಪ ಮಾಹಿತಿ ನೀಡಿದರು.
ಕರ್ನಾಟಕದ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ವರದಿಯ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. "ವರದಿ ಬಗ್ಗೆ ನನಗೇನು ಗೊತ್ತಿಲ್ಲ. ನೀವು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಸಾಧ್ಯವಿಲ್ಲ "ಎಂದು ಈಶ್ವರಪ್ಪ ಮಾಧ್ಯಮ ಪ್ರತಿನಿಧಿಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
"ರಾಜ್ಯ ಬಿಜೆಪಿ ಕಾರ‍್ಯಕಾರಣಿ ಬಗ್ಗೆ ಆಹ್ವಾನ ಬಂದಿಲ್ಲ. ಕಾರ‍್ಯಕಾರಣಿಯ ದಿನಾಂಕ ನಿಗದಿಯಾಗಿಲ್ಲ "ಎಂದು ಈಶ್ವರಪ್ಪ ಹೇಳಿದರು.
"ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ವೈ ಅವರ ಕೆಜಿಪಿ 6 ಮತ್ತು ಬಿಜೆಪಿಗೆ 40 ಸ್ಥಾನ ಪಡೆದಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಲೋಕಸಭೆ ಚುನಾವಣೆಗೆ ಯಡಿಯೂರಪ್ಪ ಬಿಜೆಪಿಗೆ ವಾಪಸಾಗಿದ್ದರು. ಇದರಿಂದ ಬಿಜೆಪಿ 17 ,ಕಾಂಗ್ರೆಸ್ 9 ಸ್ಥಾನ ಪಡೆದಿತ್ತು. ಈಗ ಒಂದಾಗಿದ್ದೇವೆ. ರಾಜ್ಯ ಬಿಜೆಪಿಯಲ್ಲಿರುವುದು ತಾತ್ಕಾಲಿಕ ಗೊಂದಲ. ಎಲ್ಲವೂ ಬೇಗನೆ ಸರಿ ಹೋಗುತ್ತೆ. ಮೋದಿ ಮತ್ತು ಯಡಿಯೂರಪ್ಪ ಪ್ರಭಾವದಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ.ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾದರೂ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ"ಎಂದು ಈಶ್ವರಪ್ಪ ಹೇಳಿದರು.





