ತಾಯಿಯ ಮಸಾಜ್: ಜೀವ ಕಳೆದುಕೊಂಡ ಗಾಯಾಳು ಪುತ್ರ
ಮನೆಯಲ್ಲಿ ಮಸಾಜ್ ಮಾಡುವವರೇ, ಎಚ್ಚರಿಕೆ...

ಹೊಸದಿಲ್ಲಿ, ಮೇ 2: ತೈಲ ಮಸಾಜ್ ಒಳ್ಳೆಯದು, ನೋವಿನಿಂದ ಆರಾಮ ನೀಡಬಹುದು ಆದರೆ ತಪ್ಪಾದ ರೀತಿಯಲ್ಲಿ ಮಸಾಜ್ ಅಗತ್ಯವಿಲ್ಲದವರಿಗೆ ನೀಡಿದಲ್ಲಿ ಅದು ಪ್ರಾಣಕ್ಕೂ ಸಂಚಕಾರ ತರಬಹುದು ಎಂದು ಎಐಐಎಂಎಸ್ ವೈದ್ಯರು ಎಚ್ಚರಿಸಿದ್ದಾರೆ. 23 ವರ್ಷದ ಯುವಕನೊಬ್ಬ ತಾಯಿಯ ಮಸಾಜ್ ನಿಂದಾಗಿ ಪ್ರಾಣ ಕಳೆದುಕೊಂಡ ಘಟನೆಯ ನಂತರ ವೈದ್ಯರು ಈ ಎಚ್ಚರಿಕೆ ಬಂದಿದೆ.
ದಿಲ್ಲಿಯ ಯುವಕನೊಬ್ಬ ಬ್ಯಾಡ್ಮಿಂಟನ್ ಆಡುವಾಗ ತನ್ನ ಪಾದಕ್ಕೆ ಪೆಟ್ಟು ಮಾಡಿಕೊಂಡಿದ್ದ. ಆತ ಕಾಲನ್ನು ಅತ್ತಿತ್ತ ಅಲ್ಲಾಡಿಸದಂತೆ ಮಾಡಲು ಪ್ಲಾಸ್ಟರ್ ಆಫ್ ಪ್ಯಾರಿಸ್ ಸ್ಲ್ಯಾಬ್ ಅಳವಡಿಸಲಾಗಿತ್ತು. ಆದರೆ ಇದರಿಂದ ರಕ್ತನಾಳಗಳ್ಲಿ ರಕ್ತ ಹೆಪ್ಪುಗಟ್ಟಿತ್ತು. ಅಕ್ಟೋಬರ್ 23ರ ರಾತ್ರಿ ಪ್ರಜ್ಞೆ ಕಳೆದುಕೊಂಡಿದ್ದ ಆತನನ್ನು ಎಐಐಎಂಎಸ್ ಗೆ ಕರೆತರಲಾಗಿತ್ತು. ತಮ್ಮ ಸತತ ಪ್ರಯತ್ನಗಳ ಹೊರತಾಗಿಯೂ ವೈದ್ಯರಿಗೆ ಆತನ ಪ್ರಾಣ ಉಳಿಸಲಾಗಲಿಲ್ಲ. ಆತ ಆ ರಾತ್ರಿ 8:45 ರ ಸುಮಾರಿಗೆ ಕಾಲಿನಲ್ಲಿ ತೀವ್ರ ನೋವು ಇದೆಯೆಂದಾಗ ಆತನ ತಾಯಿ ಸುಮಾರು ಅರ್ಧ ಗಂಟೆ ಕಾಲಿಗೆ ಮಸಾಜ್ ಮಾಡಿದ್ದರೆಂಬುದು ವೈದ್ಯರಿಗೆ ನಂತರ ತಿಳಿದು ಬಂದಿತ್ತು. ಇದರಿಂದ ಆತ ಒಮ್ಮೆಗೇ ಉಸಿರಾಟದ ಸಮಸ್ಯೆಗೊಳಗಾಗಿ ಕುಸಿದು ಬಿದ್ದಿದ್ದ. ಆತನ ಕಾಲಲ್ಲಿ ಹೆಪ್ಪುಗಟ್ಟಿದ ರಕ್ತ ಶ್ವಾಸಕೋಶಕ್ಕೆ ರಕ್ತ ಪೂರೈಸುವ ರಕ್ತನಾಳಗಳಿಗೆ ಸಂಚರಿಸಿ ಆತನ ಸಾವಿಗೆ ಕಾರಣವಾಗಿತ್ತು ಎಂದು ಯುವಕನ ಪೋಸ್ಟ್ ಮಾರ್ಟಂ ನಡೆಸಿದ ವೈದ್ಯ ಡಾ ಚಿತ್ತರಂಜನ್ ಬೆಹೆರ ಹೇಳಿದ್ದಾರೆ.
ಪೋಸ್ಟ್ ಮಾರ್ಟಂ ವರದಿಯಲ್ಲಿ ಕಂಡುಬಂದಂತೆ ಆತನ ಕಾಲಲ್ಲಿದ್ದ 5X1 ಸೆ.ಮೀ. ಗಾತ್ರದ ಕ್ಲಾಟ್ ಅಲ್ಲಿಂದ ಮೇಲಕ್ಕೆ ಸಾಗಿ ಆತನ ಸಾವಿಗೆ ಕಾರಣವಾಗಿತ್ತು. ಕಾಲಿನ ಮೂಳೆ ಮುರಿತಕ್ಕೊಳಗಾದಾಗ ರಕ್ತ ಹೆಪ್ಪುಗಟ್ಟುವಿಕೆ ಸಾಮಾನ್ಯವಾದರೂ ಅದರಿಂದ ಸಾವು ಸಂಭವಿಸಿದ ಪ್ರಕರಣ ವಿರಳ ಎನ್ನುತ್ತಾರೆ ವೈದ್ಯರು.
ಈ ಪ್ರಕರಣದ ವಿವರಗಳನ್ನು ಮೆಡಿಕೋ ಲೀಗಲ್ ಜರ್ನಲ್ ನ ಇತ್ತೀಚಿಗಿನ ಸಂಚಿಕೆಯಲ್ಲಿ ನೀಡಲಾಗಿದೆ. ಅಪಾಯದ ಅರಿವಿಲ್ಲದೆ ಯುವಕನ ಕಾಲಿಗೆ ತಾಯಿ ನೀಡಿದ ಮಸಾಜ್ ಆತನ ಸಾವಿಗೆ ಕಾರಣವಾಗಿತ್ತು. ‘‘ಇಂತಹ ಮಸಾಜ್ ನಿಂದ ಆಗುವ ಅಪಾಯಗಳ ಬಗ್ಗೆ ಆಸ್ಪತ್ರೆಯ ವೈದ್ಯರು ರೋಗಿಯ ಕಡೆಯವರಿಗೆ ಮಾಹಿತಿ ನೀಡಿರಲಿಲ್ಲ. ನೀಡಬೇಕಿತ್ತು,’’ ಎಂದು ವರದಿಯಲ್ಲಿ ಹೇಳಲಾಗಿದೆ.