ಸೌದಿ: ಉದ್ಯೋಗಕ್ಕೆ ಬಂದ ಮಾಜಿ ಪಂಚಾಯತ್ ಸದಸ್ಯೆ ನಿಗೂಢ ಸಾವು

ಬುರೈದ, ಮೇ.2: ಹಾಯಿಲ್‌ನಲ್ಲಿ ಕೇರಳದ ಮಹಿಳೆಯೊಬ್ಬರ ಸಾವು ನಿಗೂಢವಾಗಿದೆ. ಕಾಂಗ್ರೆಸ್ ಕಾರ್ಯಕರ್ತೆ ವಯನಾಡ್ ಪಂಚಾಯತ್ ಮಾಜಿಸದಸ್ಯೆ ಪಳ್ಳಿಕುನ್ನ್ ಸಿಸಿಲಿಮೈಕಲ್(48) ಕಳೆದ ತಿಂಗಳು 23 ತಾರೀಕಿನಂದು ಹಾಯಿಲ್‌ನ ಕಿಂಗ್ ಖಾಲಿದ್ ಆಸ್ಪತ್ರೆಯಲ್ಲಿಮೃತಪಟ್ಟಿದ್ದರು. ಇವರನ್ನು ಆಸ್ಪತ್ರೆಗೆ ಅಪ್ರಜ್ಞಾ ಸ್ಥಿತಿಯಲ್ಲಿ ಸೇರಿಸಲಾಗಿತ್ತು. ಪ್ರಜ್ಞೆ ಬಂದಾಗ ಆಸ್ಪತ್ರೆಯಲ್ಲಿರುವ ಕೇರಳದ ನರ್ಸ್‌ಗಳಿಗೆ ಸಂದೇಶ ನೀಡಿದ್ದಾರೆ. ಆ ನಂತರ ಕೇವಲ ಮೂರುಗಂಟೆಗಳಲ್ಲಿ ಅವರು ನಿಧನರಾಗಿದ್ದರು.
ಆದರೆ ಆಸ್ಪತ್ರೆಯ ಮರಣೋತ್ತರ ವರದಿಯಲ್ಲಿ ಮಧುಮೇಹದಿಂದಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವಿವರಿಸಲಾಗಿದೆ. ಕಳೆದ ಜನವರಿ ಹದಿನೈದಕ್ಕೆ ಸಿಸಿಲಿ ಸೌದಿ ಅರೇಬಿಯಕ್ಕೆ ಬಂದಿದ್ದರು. ಡೇಕೇರ್‌ನಲ್ಲಿ ಅವರಿಗೆ ಕೆಲಸ ಮತ್ತು ಪ್ರತಿತಿಂಗಳು 2500ರಿಯಾಲ್ ಸಂಬಳ ಎಂದು ಹೇಳಿದ್ದ ಊರಿನ ಇಬ್ಬರು ಏಜೆಂಟ್‌ಗಳು ಕಲ್ಲಿಕೋಟೆಯ ಖಾಸಗಿ ರಿಕ್ರ್ಯೂಟಿಂಗ್ ಏಜೆನ್ಸಿ ಮೂಲಕ ಸೌದಿಗೆ ಕಳುಹಿಸಿದ್ದರು. ಆದರೆ ವಿಮಾನದಿಂದ ಸೌದಿಯಲ್ಲಿ ಇಳಿದ ಒಂದು ವಾರ ಕಳೆದು ಅಲ್ಲಿನ ಸ್ವದೇಶಿ ಪ್ರಜೆಯ ಮನೆಗೆ ತಲುಪಿಸಲಾಗಿತ್ತು. ಪುರುಸೊತ್ತಿಲ್ಲದೆ ಕಠಿಣ ಕೆಲಸ, ಸರಿಯಾಗಿ ಆಹಾರ ಸಿಕ್ಕಿರದ್ದನ್ನು ಅವರು ಊರಿನ ಸಂಬಂಧಿಕರು ಮತ್ತು ಸೌದಿಯಲ್ಲಿದ್ದ ಇತರ ಪರಿಚಯಸ್ಥರಿಗೆ ತಿಳಿಸಿದ್ದರು. ನಂತರ ಸಾಮಾಜಿ ಕಾರ್ಯಕರ್ತರ ಸೂಚನೆಯಂತೆ ಜಿಲ್ಲಾ ಪೊಲೀಸಧಿಕಾರಿಗೆ ಸಂಬಂಧಿಕರು ದೂರು ನೀಡಿದ್ದರು. ರಿಯಾದ್‌ನ ಇಂಡಿಯನ್ ದೂತವಾಸಕ್ಕೂ ದೂರು ನೀಡಲಾಗಿತ್ತು. ಈ ನಡುವೆ ಸಿಸಿಲಿಯವರನ್ನು ಇನ್ನೋರ್ವ ಸ್ವದೇಶಿಯ ಮನೆಗೆ ಹಸ್ತಾಂತರಿಸಲಾಗಿತ್ತು. ಈವೇಳೆ ಸಿಸಿಲಿಯವರನ್ನು ಸಂಪರ್ಕಿಸಲು ಯಾರಿಗೂ ಸಾಧ್ಯವಾಗಿರಲಿಲ್ಲ. ಸಿಸಿಲಿ ತೀವ್ರ ಅನರೋಗ್ಯಕ್ಕೆ ತುತ್ತಾದಾಗ ಸ್ವದೇಶಿ ವ್ಯಕ್ತಿ ಸಿಸಿಲಿಯವರನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿದ್ದ.
ಸಿಸಿಲಿಯವರ ಸಾವಿನ ಕುರಿತು ತನಿಖೆ ನಡೆಸಬೇಕು. ಮೃತದೇಹವನ್ನು ಊರಿಗೆ ತರಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕುಟುಂಬಸ್ಥರು ರಾಜ್ಯಸರಕಾರ , ರಿಯಾದ್‌ನ ಭಾರತೀಯ ದೂತವಾಸದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸಿಸಿಲಿಯವರನ್ನು ಪತಿತೊರೆದು ಹೋಗಿದ್ದರು. ಹದಿನೇಳುವರ್ಷದ ಓರ್ವ ಮಗಳು ಅವರಿಗಿದ್ದಾರೆ. ಇದೇವೇಳೆಸಿಸಿಲಿ ನಿಧನರಾದ ಸುದ್ದಿಯನ್ನು ಅವರ ಅಮ್ಮ ಎಮಿಲಿಯವರಿಗೆ ಈವರೆಗೂ ತಿಳಿಸಲಾಗಿಲ್ಲ. ಈ ಹಿಂದೆ ನಿಧನರಾಗಿರುವ ಸಿಸಿಲಿಯ ತಂದೆ ಮೈಕಲ್ ಹತ್ತುವರ್ಷ ಪಂಚಾಯತ್ ಸದಸ್ಯರಾಗಿದ್ದರೂ ಸಿಸಿಲಿ ಬಡಕುಟುಂಬದ ಸದಸ್ಯೆಯಾಗಿದ್ದಾರೆ.







