ಮಲ್ಯ ಗಡಿಪಾರಿಗೆ ಭಾರತ ಯತ್ನ

ಹೊಸದಿಲ್ಲಿ,ಮೇ 2: ಮಾಜಿ ಮದ್ಯದ ದೊರೆ ವಿಜಯ ಮಲ್ಯರ ಗಡೀಪಾರು ಕುರಿತು ಚರ್ಚೆಗಳಿಗಾಗಿ ಸಿಬಿಐ ಹೆಚ್ಚುವರಿ ನಿರ್ದೇಶಕ ರಾಕೇಶ ಅಸ್ಥಾನಾ ನೇತೃತ್ವದ ತನಿಖಾ ಸಂಸ್ಥೆಯ ಮತ್ತು ಜಾರಿ ನಿರ್ದೇಶನಾಲಯ(ಇಡಿ)ದ ತಲಾ ಇಬ್ಬರು ಹಿರಿಯ ಅಧಿಕಾರಿ ಗಳ ತಂಡವೊಂದು ಲಂಡನ್ ತಲುಪಿದೆ. ಈ ತಂಡವು ಮಲ್ಯ ವಿರುದ್ಧದ ಸಾಲಬಾಕಿ ಪ್ರಕರಣ ಗಳ ಬಗ್ಗೆ ಸಂಪೂರ್ಣ ವಿವರಗಳನ್ನು ಬ್ರಿಟಿಷ್ ಅಧಿಕಾರಿಗಳಿಗೆ ಒದಗಿಸಲಿದೆ ಎಂದು ಸಿಬಿಐ ಮೂಲಗಳು ಮಂಗಳವಾರ ಇಲ್ಲಿ ತಿಳಿಸಿದವು.
ಮಲ್ಯ ಗಡೀಪಾರು ವಿಷಯವೀಗ ಬ್ರಿಟಿಷ್ ನ್ಯಾಯಾಲಯದಲ್ಲಿದ್ದು, ಸಿಬಿಐ ಅಥವಾ ಇಡಿ ಈ ಪ್ರಕರಣದಲ್ಲಿ ನೇರ ಕಕ್ಷಿಗಳಾಗಿಲ್ಲ. ಭಾರತೀಯ ಏಜೆನ್ಸಿಗಳು ನ್ಯಾಯಾಲಯ ಗಳಲ್ಲಿ ವಿದೇಶಗಳಿಗೆ ಪರಾರಿಯಾಗಿರುವವರ ಅಹವಾಲುಗಳನ್ನು ಎದುರಿಸಲು ಬ್ರಿಟಿಷ್ ಪ್ರಾಸಿಕ್ಯೂಷನ್‌ಗೆ ನೆರವನ್ನು ನೀಡುತ್ತವೆ.
ಮಲ್ಯ ಗಡೀಪಾರಿಗಾಗಿ ಬಲವಾದ ವಾದವನ್ನು ಮಂಡಿಸುವುದು ಲಂಡನ್‌ಗೆ ಈ ತಂಡದ ರವಾನೆಯ ಉದ್ದೇಶವಾಗಿದೆ.
ಸಿಬಿಐ ತನಿಖೆ ನಡೆಸುತ್ತಿರುವ, ಐಡಿಬಿಐ ಬ್ಯಾಂಕಿನ ಸಾಲಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಯ ಗಡೀಪಾರಿಗೆ ಭಾರತದ ಕೋರಿಕೆಯ ಮೇರೆಗೆ ಬ್ರಿಟಿಷ್ ಅಧಿಕಾರಿಗಳು ಕಳೆದ ತಿಂಗಳು ಅವರನ್ನು ಬಂಧಿಸಿದ್ದರು. ಕೆಲವೇ ಗಂಟೆಗಳಲ್ಲಿ ಮಲ್ಯರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದ ಲಂಡನ್ನಿನ ನ್ಯಾಯಾಲಯವು ಮುಂದಿನ ವಿಚಾರಣೆ ಯನ್ನು ಮೇ 17ಕ್ಕೆ ನಿಗದಿಗೊಳಿಸಿದೆ.
ಮಲ್ಯ ಒಡೆತನದ ಕಿಂಗ್‌ಫಿಷರ್ ಏರ್‌ಲೈನ್ಸ್ ವಿವಿಧ ಬ್ಯಾಂಕ್‌ಗಳಿಗೆ 9,000 ಕೋ.ರೂ.ಅಧಿಕ ಸಾಲವನ್ನು ಬಾಕಿಯಿರಿಸಿದೆ. ಮಲ್ಯ ಕಳೆದ ವರ್ಷದ ಮಾ.2ರಂದು ಭಾರತದಿಂದ ಪರಾರಿಯಾಗಿದ್ದರು.
ಬ್ರಿಟನ್‌ನಿಂದ ಗಡೀಪಾರು ಪ್ರಕ್ರಿಯೆಯು ಬಂಧನ ವಾರಂಟ್ ಹೊರಡಿಸಬೇಕೇ ಬೇಡವೇ ಎಂಬ ಕುರಿತು ನ್ಯಾಯಾಧೀಶರ ನಿರ್ಧಾರ ಸೇರಿದಂತೆ ಹಲವಾರು ಮಜಲುಗಳನ್ನೊಳಗೊಂಡಿದೆ.
ವಾರಂಟ್ ಪ್ರಕರಣದಲ್ಲಿ ವಿದೇಶಾಂಗ ಕಾಯದರ್ಶಿಗಳು ಅಂತಿಮ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಮುನ್ನ ವ್ಯಕ್ತಿಯನ್ನು ಬಂಧಿಸಿ ಪ್ರಾಥಮಿಕ ವಿಚಾರಣೆಗಾಗಿ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುತ್ತದೆ. ‘ಅಪೇಕ್ಷಿತ ’ವ್ಯಕ್ತಿಯು ಯಾವುದೇ ತೀರ್ಪಿನ ವಿರುದ್ಧ ಸವೋಚ್ಚ ನ್ಯಾಯಾಲಯದವರೆಗೂ ಮೇಲ್ಮನವಿಗಳನ್ನು ಸಲ್ಲಿಸುವ ಹಕ್ಕು ಹೊಂದಿರುತ್ತಾನೆ.







