‘ಬಾಹುಬಲಿ 2’ ಒಂದು ಸಾವಿರ ಕೋ.ರೂ.ಗೂ ಅಧಿಕ ಗಳಿಕೆಯ ಮೊದಲ ಭಾರತೀಯ ಚಿತ್ರವಾಗುವುದೇ ?

ಹೈದರಾಬಾದ್,ಮೇ 2: ನಿರ್ದೇಶಕ ಎಸ್.ಎಸ್.ರಾಜಮೌಳಿಯವರ ‘ಬಾಹುಬಲಿ 2’ ಚಿತ್ರವು ಆರಂಭದ ದಿನದಿಂದ ವಾರಾಂತ್ಯದ ಗಳಿಕೆಯವರೆಗೆ ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಬಿಡುಗಡೆಯಾದಾಗಿನಿಂದ ಚಿತ್ರದ ಗಳಿಕೆಯ ರಭಸವನ್ನು ಪರಿಗಣಿಸಿದರೆ ಅದು ಸುಲಭವಾಗಿ 1000 ಕೋ.ರೂ.ಕ್ಲಬ್‌ಗೆ ಸೇರ್ಪಡೆಯಾಗಬಹುದು ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ.
ಬಾಕ್ಸಾಫೀಸಿನಲ್ಲಿ ಚಿತ್ರದ ನಾಗಾಲೋಟ ನಿಲ್ಲುತ್ತಲೇ ಇಲ್ಲ. ಮೊದಲ ವಾರಾಂತ್ಯದಲ್ಲಿ 500 ಕೋ.ರೂ.ಅಧಿಕ ಹಣವನ್ನು ಬಾಚಿಕೊಂಡಿರುವ ಚಿತ್ರವು ಈಗ 1,000 ಕೋ.ರೂ.ಕ್ಲಬ್‌ಗೆ ಸೇರುವ ಮೊದಲ ಚಿತ್ರವೆಂಬ ಹೆಗ್ಗಳಿಕೆ ಪಡೆದುಕೊಳ್ಳುವತ್ತ ಧಾವಿಸುತ್ತಿದೆ. ‘ಬಾಹುಬಲಿ 2’ ಕುರಿತು ಜನರಲ್ಲಿ ಹುಚ್ಚು ಹೆಚ್ಚುತ್ತಲೇ ಇದ್ದು, ಮೊದಲ ವಾರದಲ್ಲಿಯೇ ಅದು ಈ ಸಾಧನೆ ಮಾಡಿದರೆ ಅಚ್ಚರಿ ಪಡಬೇಕಿಲ್ಲ.
ಸುಲ್ತಾನ್ ಮತ್ತು ದಂಗಲ್‌ನಂತಹ ಹಲವಾರು ಬಾಲಿವುಡ್ ಹಿಟ್‌ಗಳ ಪ್ರಥಮ ವಾರದ ಗಳಿಕೆಯನ್ನು ‘ಬಾಹುಬಲಿ 2’ ಈಗಾಗಲೇ ಮೀರಿದೆ. ಆಸಕ್ತಿಯ ವಿಷಯವೆಂದರೆ ಅದು 100 ಕೋ.ರೂ.ಗಳಿಕೆಯನ್ನು ದಾಟಿದ, ಹಿಂದಿಗೆ ಡಬ್ ಆಗಿರುವ ಮೊದಲ ಚಿತ್ರವಾಗಿದೆ. ಆರಂಭದ ವಾರಾಂತ್ಯದಲ್ಲಿ ಅದು ‘ಬಾಹುಬಲಿ 1’ರ ಗಳಿಕೆಯನ್ನೂ ಮೀರಿಸಿರುವುದು ನಿರ್ಮಾಪಕರಿಗೆ ಅಚ್ಚರಿ ಮೂಡಿಸಿದೆ.





