ಸಮಾಜಮುಖಿ ಮಕ್ಕಳ ಸೃಷ್ಟಿ ಅಗತ್ಯ: ಶ್ರೀಲತಾ ರಾವ್
ಕೋಡಿ ಬ್ಯಾರೀಸ್ ಸ್ಕೂಲ್‌ನಲ್ಲಿ ಸಿಬಿಎಸ್‌ಇಗೆ ಚಾಲನೆ

ಉಡುಪಿ, ಮೇ 2: ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನ ಎದುರಿಸುವ ಕಲೆಯನ್ನು ನಾವು ಹೇಳಿಕೊಡಬೇಕಾಗಿದೆ. ಸಮಾಜಮುಖಿ ಮಕ್ಕಳ ಸೃಷ್ಟಿ ಇಂದಿನ ಅಗತ್ಯವಾಗಿದೆ ಎಂದು ಮಂಗಳೂರು ತೊಕ್ಕೊಟಿನ ಡಾ.ಎಂ.ಡಿ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಹಾಗೂ ಉಡುಪಿ ಕರಾವಳಿ ಸಹೋದಯ ಅಧ್ಯಕ್ಷೆ ಶ್ರೀಲತಾ ರಾವ್ ಹೇಳಿದ್ದಾರೆ.
ಹಾಜಿ ಕೆ.ಮೊಯ್ದಿನ್ ಬ್ಯಾರಿ ಎಜುಕೇಶನ್ ಟ್ರಸ್ಟ್ ಅಧೀನದ ಕೋಡಿ ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್‌ನಲ್ಲಿ ನೂತನವಾಗಿ ಆರಂಭಗೊಂಡಿರುವ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(ಸಿಬಿಎಸ್‌ಇ) ಪಠ್ಯಕ್ರಮ ವ್ಯವಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಕ್ಕಳಲ್ಲಿ ಉತ್ತಮ ಕೌಶಲ್ಯ ಹಾಗೂ ಆತ್ಮವಿಶ್ವಾಸ ಮೂಡಿಸುವ ಕಾರ್ಯವನ್ನು ಮಾಡಬೇಕು. ಮಕ್ಕಳಲ್ಲಿರುವ ನಾಯಕತ್ವ ಸಾಮರ್ಥ್ಯವನ್ನು ಗುರುತಿಸಬೇಕು. ಮಕ್ಕಳ ಭಾವನೆಯನ್ನು ಹೆತ್ತವರು ಅರಿತುಕೊಳ್ಳಬೇಕು. ಮಕ್ಕಳಿಗೆ ತಮ್ಮ ಸಮಯ ವನ್ನು ಮೀಸಲಿಡಬೇಕು ಎಂದು ಅವರು ತಿಳಿಸಿದರು.
ಟಿವಿ, ಮೊಬೈಲ್‌ನಿಂದ ಮಕ್ಕಳನ್ನು ದೂರ ಇರಿಸಬೇಕು. ಮೊಬೈಲ್ ಚಟವನ್ನು ಮಕ್ಕಳು ಮೈಗೂಡಿಸಿಕೊಂಡರೆ ಅದನ್ನು ಬಿಡಿಸುವುದು ಬಹಳ ಕಷ್ಟ. ಹಾಗಾಗಿ ಸಾಕಷ್ಟು ಎಚ್ಚರಿಕೆಯಿಂದ ಮಕ್ಕಳನ್ನು ಬೆಳೆಸಬೇಕಾಗುತ್ತದೆ. ಶಿಸ್ತಿನ ಜೀವನವನ್ನು ಮಕ್ಕಳಿಗೆ ಕಲಿಸಿಕೊಟ್ಟು, ವಾಸ್ತವಿಕತೆಯನ್ನು ಅರ್ಥ ಮಾಡಿಸಬೇಕು. ಮಕ್ಕಳಲ್ಲಿ ಸಹನೆ, ಪ್ರೀತಿ, ಒಳ್ಳೆಯ ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಟ್ರಸ್ಟ್‌ನ ಆಡಳಿತ ಟ್ರಸ್ಟಿ ಸೈಯದ್ ಮುಹಮ್ಮದ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಶ್ರೀಮಂತನನ್ನಾಗಿ ಮಾಡುವ ಬದಲು ಸಿರಿವಂತನನ್ನಾಗಿ ಮಾಡಬೇಕು. ಕೇವಲ ಶ್ರೀಮಂತನಾದವ ಮುಂದೆ ತನ್ನ ತಂದೆತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಾನೆ. ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಹೆಚ್ಚಾಗಬೇಕು. ಇದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಟ್ರಸ್ಟ್‌ನ ಅಧ್ಯಕ್ಷ ಹಾಜಿ ಮಾಸ್ಟರ್ ಮಹಮೂದ್ ವಹಿಸಿದ್ದರು. ಈ ಸಂದರ್ಭದಲ್ಲಿ ಕರಾಟೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಪದಕ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪುರಸಭಾ ಸದಸ್ಯ ಪ್ರಭಾಕರ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಪ್ರಕಾಶ್, ಬಿಎಡ್ ಕಾಲೇಜಿನ ಪ್ರಾಂಶುಪಾಲ ಸಿದ್ಧಪ್ಪ, ಸ್ಕೂಲ್‌ನ ಉಪಪ್ರಾಂಶುಪಾಲೆ ರೇಶ್ಮಾ ಮೊದಲಾದವರು ಉಪಸ್ಥಿತರಿದ್ದರು.
ಸಿಬಿಎಸ್‌ಸಿ ಸ್ಕೂಲ್‌ನ ಪ್ರಾಂಶುಪಾಲೆ ಫಿರ್ದೌಸ್ ಸ್ವಾಗತಿಸಿದರು. ಶಿಕ್ಷಕಿಯ ರಾದ ಶ್ವೇತಾ ಹಾಗೂ ರೆಹಮತ್ ಕಾರ್ಯಕ್ರಮ ನಿರೂಪಿಸಿದರು.







