ಮೇ 4: ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ನೆನಪಿನ ಸಮಾವೇಶ
ಮಡಿಕೇರಿ, ಮೇ 2: ಟಿಪ್ಪು ಸುಲ್ತಾನರ ಕುರಿತು ಹರಿದಾಡುತ್ತಿರುವ ಪೂರ್ವಗ್ರಹ ಪೀಡಿತ ಚಿಂತನೆಗಳನ್ನು ನಿವಾರಿಸುವ ಉದ್ದೇಶದಿಂದ ಮೇ 4ರಂದು ಟಿಪ್ಪು ಸುಲ್ತಾನ್ ನೆನಪಿನ ಸಮಾವೇಶವನ್ನು ಮೈಸೂರಿನಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಸದಸ್ಯ ಹಾಗೂ ವಕೀಲರಾದ ಕೆ.ಆರ್.ವಿದ್ಯಾಧರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಮೈಸೂರಿನ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಗೆ ಸಮಾವೇಶ ನಡೆಯಲಿದೆ ಎಂದರು. 1799ರ ಮೇ 4ರಂದು ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಹೋರಾಡುತ್ತಲೇ ಟಿಪ್ಪು ಸುಲ್ತಾನ್ ರಣರಂಗದಲ್ಲಿ ಮಡಿದ ಶ್ರೀರಂಗಪಟ್ಟಣದ ಸ್ಥಳದಲ್ಲಿ ಬೆಳಗ್ಗೆ 9 ಗಂಟೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಗೌರವಾರ್ಪಣೆ ಮಾಡಲಿದ್ದಾರೆ. ಅಂದು ಬೆಳಗ್ಗೆ 10:30ಕ್ಕೆ ಮೈಸೂರು ಟೌನ್‌ಹಾಲ್ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಮೆರವಣಿಗೆ ನಡೆಯಲಿದ್ದು, ಬಳಿಕ ಸಮಾವೇಶ ನಡೆಯಲಿದೆ ಎಂದು ವಿದ್ಯಾಧರ್ ತಿಳಿಸಿದರು.
ಪ್ರಗತಿಪರ ಚಿಂತನೆಯ ಜನಾನುರಾಗಿ ಟಿಪ್ಪು ಸುಲ್ತಾನ್ ತನ್ನ ಆಡಳಿತಾವಧಿಯಲ್ಲಿ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದ್ದಾನೆ. ಆತನನ್ನು ವಸ್ತುನಿಷ್ಠವಾಗಿ ನೋಡಬೇಕೆನ್ನುವುದು ನಮ್ಮ ಹಂಬಲ. ಹಾಗೆ ನೋಡಿದಾಗ ಮಾತ್ರ ಆತನ ನಿಜವಾದ ಗುಣ ಅರಿಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ನೀಡಿದ ಕೊಡುಗೆ, ಆತನ ಕಾಲದಲ್ಲಿ ಆದ ಕೈಗಾರಿಕಾ ಕ್ರಾಂತಿ, ಕೃಷಿ ಚಟುವಟಿಕೆ, ರೈತರನ್ನು ದೊಡ್ಡದೊಡ್ಡ ಭೂಮಾಲಕರ ಶೋಷಣೆಯಿಂದ ಪಾರುಮಾಡಿ ಉಳುವವನನ್ನೇ ಹೊಲದೊಡೆಯನನ್ನಾಗಿ ಮಾಡಿದ್ದು, ನೀರಾವರಿ ಯೋಜನೆಗಳು, ಹೆದ್ದಾರಿ ಯೋಜನೆಗಳು ಇಂದಿಗೂ ಮಾದರಿಯಾಗಿದೆ. ಬ್ರಿಟಿಷರ ಪರವಾಗಿದ್ದ ಸ್ಥಳೀಯರು ಮಾತ್ರ ಆತನನ್ನು ಖಳನಾಯಕನಂತೆ ಬಿಂಬಿಸಿದ್ದಾರೆಂದ ಅವರು, ಕೊಡಗಿನಲ್ಲಿ ಕೂಡಾ ಆತ ಕೊಡವರನ್ನು ಹತ್ಯೆ ಮಾಡಿದ ಎಂದು ಆರೋಪಿಸಲಾಗುತ್ತಿದೆ. ಆದರೆ ಆತ ಹಾಲೇರಿ ರಾಜರ ಪರವಾಗಿದ್ದವರನ್ನು ಮಾತ್ರ ಹತ್ಯೆ ಮಾಡಿದ್ದು, ಅಂದಿನ ಕಾಲಘಟಕ್ಕೆ ಓರ್ವ ರಾಜನಾಗಿ ಆತ ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದಾನೆ ಎಂದು ವಿದ್ಯಾಧರ್ ಮಾಹಿತಿ ನೀಡಿದರು.
ಟಿಪ್ಪು ಕೊಡವ ಸಮುದಾಯದವರನ್ನು ಮತಾಂತರ ಮಾಡಿದ್ದಾನೆ, ಹತ್ಯೆ ಮಾಡಿದ್ದಾನೆ ಎನ್ನುವುದು ಪೂರ್ವಗ್ರಹ ಪೀಡಿತ ವಿಚಾರ. ಇದನ್ನು ಹುಟ್ಟು ಹಾಕಿದಾತ ಕೊಡಗಿನ ನಾಟಕಕಾರ, ದಿನಕ್ಕೊಂದು ವೇಷ ಬದಲಾಯಿಸುವ ವ್ಯಕ್ತಿ ಎಂದು ಅವರು ವ್ಯಂಗ್ಯವಾಡಿದರು.







