ವಿಪಿಎಲ್ ಕ್ರಿಕೆಟ್ ಲೀಗ್: ಅಲ್ ಫಲಾಹ್ ವಿನ್ನರ್, ಕೆ.ಕೆ. ಫ್ರೆಂಡ್ಸ್ ರನ್ನರ್ಸ್

ಮೂಡುಬಿದಿರೆ, ಮೇ 2: ಫ್ರೆಂಡ್ಸ್ ವಾಲ್ಪಾಡಿ ಆಶ್ರಯದಲ್ಲಿ ಶಿರ್ತಾಡಿ ಜವಾಹರಲಾಲ್ ನೆಹರು ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 8 ದಿನಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದಲ್ಲಿ ಅಲ್ ಫಲಾಹ್ ಮೂಡುಬಿದಿರೆ ತಂಡವು ವಿನ್ನರ್ ಆಗಿ ಮೂಡಿಬಂದಿದ್ದು, ಸಾಮ್ರಾಜ್ಯ ಟ್ರೋಫಿ, 11 ಮುಡಿ ಅಕ್ಕಿ ಹಾಗೂ 1 ಲಕ್ಷ ರೂ.ನ್ನು ತನ್ನದಾಗಿಸಿಕೊಂಡಿತು. ಕೆ.ಕೆ. ಫ್ರೆಂಡ್ಸ್ ತಂಡವು ರನ್ನರ್ ಅಪ್ ಆಗಿ ಮೂಡಿಬಂದಿದ್ದು, ಸಾಮ್ರಾಜ್ಯ ಟ್ರೋಫಿ, 60 ಸಾವಿರ ರೂ. ಹಾಗೂ 11 ಮುಡಿ ಅಕ್ಕಿಯನ್ನು ಪಡೆದುಕೊಂಡಿತು.
ತೃತೀಯ ಬಹುಮಾನವನ್ನು ಎಸ್‌ಇಎಸ್ ಈದುಕ್ರಾಸ್ ತಂಡವು ಗಳಿಸಿದರೆ, ಚತುರ್ಥ ಬಹುಮಾನವನ್ನು ನಝ್ಮಾ ಮೂಡುಬಿದಿರೆ ತಂಡವು ಪಡೆದುಕೊಂಡಿತು. ಸಫರ್ ಫ್ರೆಂಡ್ಸ್ ಮರಿಯಾಡಿ ತಂಡವು ಉತ್ತಮ ತಂಡ, ಎಸ್‌ಕೆಎಂ ಮಾಂಟ್ರಾಡಿ ತಂಡದ ನಾಯಕ ಸುರೇಶ್ ಉತ್ತಮ ನಾಯಕ, ಈದುಕ್ರಾಸ್ ತಂಡದ ಇಮ್ತಿಯಾಝ್ ಉತ್ತಮ ದಾಂಡಿಗ, ನಝ್ಮಿ ತಂಡದ ಹಾರಿಸ್ ಉತ್ತಮ ಎಸೆತಗಾರ, ಕೆಕೆ ಫ್ರೆಂಡ್ಸ್ ತಂಡದ ಪ್ರಜ್ವಲ್ ಸರಣಿ ಶ್ರೇಷ್ಠ ಹಾಗೂ ಅಲ್ ಫಲಾಹ್ ತಂಡದ ಮರ್ಝೂಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.
ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಜವಾಹರಲಾಲ್ ನೆಹರು ಪ್ರೌಢಶಾಲೆಯ ಸಂಚಾಲಕ ಸಂಪತ್ ಸಾಮ್ರಾಜ್ಯ, ಕ್ರೀಡೆಯಲ್ಲಿ ಸ್ಪರ್ಧಾತ್ಮಕ ಮನೋಭಾವಕ್ಕೆ ಹೆಚ್ಚು ಒತ್ತು ನೀಡಬೇಕು. ಶ್ರದ್ಧೆಯಿಂದ ಯಶಸ್ಸು ಸಾಧ್ಯ. ಕ್ರೀಡಾಮನೋಭಾವ ಯುವಕರಲ್ಲಿ ಬಿತ್ತುವಲ್ಲಿ ಇಂತಹ ಕ್ರಿಕೆಟ್ ಟೂರ್ನಮೆಂಟ್‌ಗಳು ಸಹಕಾರಿಯಾಗುತ್ತವೆ. ಶಾಂತಿ ಸಹೋದರತೆಯ ಬಾಳ್ವೆಗೆ ಇಲ್ಲಿ ಮಹತ್ವ ನೀಡಲಾಗಿದ್ದು, ಯುವಜನಾಂಗ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದರು.
ಉದ್ಯಮಿ ತಿಮ್ಮಯ್ಯ ಶೆಟ್ಟಿ ಮಾತನಾಡಿ, ಕ್ರಿಕೆಟ್‌ನಲ್ಲಿ ಟ್ರೋಫಿ ಹಾಗೂ ನಗದಿನ ಜೊತೆಗೆ ಅಕ್ಕಿ ಮುಡಿಯನ್ನು ಬಹುಮಾನವಾಗಿ ನೀಡಿ ಗ್ರಾಮೀಣ ಸೊಬಗನ್ನು ಹಚ್ಚಲಾಗಿದೆ. ದೇಸೀಯ ಮೆರುಗು ಕ್ರೀಡೆಗಳಲ್ಲಿ ಪಸರಿಸಿದಲ್ಲಿ ಯುವಜನಾಂಗಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ. ಸಹಬಾಳ್ವೆಯ ನೆನಪನ್ನು ಮೆಲುಕು ಹಾಕುವಂತಹ ಕಾರ್ಯಕ್ರಮಗಳ ಸರಣಿ ಸಮಾಜದಲ್ಲಿ ಮುಂದುವರಿಯಬೇಕಿದೆ ಎಂದು ಹೇಳಿದರು.
ಮುಡಾ ಅಧ್ಯಕ್ಷ ಸುರೇಶ್ ಪ್ರಭು, ರಾಮಣ್ಣ ಶೆಟ್ಟಿ ಶಿರ್ತಾಡಿ ಹಾಗೂ ನೋಣಯ್ಯ ಮಕ್ಕಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಶಿರ್ತಾಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಫಕೀರಬ್ಬ ಮರೋಡಿ, ಗುತ್ತಿಗೆದಾರ ಗಿರೀಶ್ ಕುಮಾರ್, ಅಬ್ದುರ್ರಹ್ಮಾನ್, ಮಾಲಿಕ್ ಅಝೀಝ್, ಸುಶಾಂತ್ ಸಾಮ್ರಾಜ್ಯ, ಅಬ್ದುಲ್ ಹಮೀದ್ ವಾಲ್ಪಾಡಿ, ಗ್ರಾಪಂ ಸದಸ್ಯರಾದ ಹರೀಶ್ ಆಚಾರ್ಯ, ಗಣೇಶ್ ಬಿ. ಅಳಿಯೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘಟಕ ಅಶ್ರಫ್ ವಾಲ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಕೀಬ್ ವಾಲ್ಪಾಡಿ ಸ್ವಾಗತಿಸಿ, ನಿರೂಪಿಸಿದರು. ಹಾರಿಸ್ ಹೊಸ್ಮಾರ್ ವಂದಿಸಿದರು.