ಜನಾಂಗದ ಸಂಘಟನೆ ಮತ್ತು ಚಿಂತನೆಗೆ ಜಯಂತಿ ಆಚರಣೆ ಅಗತ್ಯ: ಎಚ್.ಎಸ್. ಪ್ರಕಾಶ್
.gif)
ಹಾಸನ,ಮೇ. 2: ಜಯಂತಿ ಆಚರಿಸುವುದು ಆಯಾ ಜನಾಂಗದ ಸಂಘಟನೆ ಹಾಗೂ ಭಗೀರಥರ ವಿಚಾರಗಳನ್ನು ತಿಳಿದು ಚಿಂತನೆ ಮಾಡುವುದಕ್ಕಾಗಿ ಎಂದು ಶಾಸಕ ಎಚ್.ಎಸ್. ಪ್ರಕಾಶ್ ತಿಳಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಒಂದು ಜಯಂತಿಯ ಹಿಂದೆ ಜನಾಂಗದ ಸಂಘಟನೆ ಮತ್ತು ಚಿಂತನೆ ಇರುತ್ತದೆ ಎಂದರು.
ಸಮುದಾಯ ಭವನ ನಿರ್ಮಾಣಕ್ಕಿಂತ ವಿದ್ಯಾರ್ಥಿ ನಿಲಯ ಅವಶ್ಯಕವಾಗಿದೆ. ಸರಕಾರದ ಸವಲತ್ತುಗಳ ಜೊತೆಗೆ ಜನಾಂಗದಲ್ಲಿ ಆರ್ಥಿಕವಾಗಿ ಸಧೃಡರಾಗಿರುವವರು ಸಹಕಾರ ನೀಡಿದರೆ ಉತ್ತಮ. ವಿದ್ಯಾರ್ಥಿ ನಿಲಯಕ್ಕೆ ತಮ್ಮ ಹಾಗೂ ಲೋಕಸಭಾ ಸದಸ್ಯರಿಂದ ಹೆಚ್ಚಿನ ನೆರವು ಕೊಡಿಸುವುದಾಗಿ ಭರವಸೆ ನೀಡಿದರು.
ಅಪರ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಮಾತನಾಡಿ, ಭಾರತದಲ್ಲಿ ಎಲ್ಲಿ ಹೋದರೂ ಭಗೀರಥಿಯ ಹೆಸರು ಶಾಶ್ವತವಾಗಿದೆ. ಯಾವುದೇ ಒಂದು ಕೆಲಸ ಮಾಡುವಾಗ ಕಷ್ಟವಾದರೆ ಭಗೀರಥ ಪ್ರಯತ್ನ ಎಂಬಂತೆ ಅವರ ಹೆಸರು ಹೇಳುವುದು ಸಾಮಾನ್ಯವಾಗಿದೆ. ಹಿಂದೆ ಭಗೀರಥ ಕೊನೆಯ ಪ್ರಯತ್ನವಾಗಿ ಆಕಾಶದಿಂದ ನೀರು ಬರುವಂತೆ ಮಾಡಲಾಗಿತ್ತು. ಅದಕ್ಕಾಗಿ ಕೊನೆಯ ಪ್ರಯತ್ನವಾಗಿ ಭಗೀರಥದ ಹೆಸರು ಹೇಳಿ ಯಶಸ್ವಿಯಾಗುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಮಾತನಾಡಿ, ಭಗೀರಥರ ಆದರ್ಶವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ನಮ್ಮ ದೇಶ ಸಮೃದ್ಧಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಬಿ.ಟಿ. ಸತೀಶ್, ಉಪ-ತಹಸೀಲ್ದಾರ್ ಮನೋಹರಿ, ಮುಖಂಡ ನೀಲಪ್ಪ, ಹಿರಿಯ ಪೊಲೀಸ್ ಅಧಿಕಾರಿ ಕೆ. ಅರುಣ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರು ಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಯು. ಜಿತೇಂದ್ರನಾಥ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ಸಮಾಜ ಸೇವಕ ಮಹಾಂತಪ್ಪ ಇತರರು ಪಾಲ್ಗೊಂಡಿದ್ದರು.







