ಗೊಂದಲದ ಗೂಡಾಗುತ್ತಿರುವ ಗೋಮಾಳ ಮಂಜೂರು ಪ್ರಕರಣ: ಜೋಪಡಿ ತೆರವುಗೊಳಿಸಲು ಆಗ್ರಹಿಸಿ ಧರಣಿ

ಶಿವಮೊಗ್ಗ, ಮೇ 2: ತಾಲೂಕಿನ ವೀರಣ್ಣನ ಬೆನವಳ್ಳಿ ಗ್ರಾಮದ ಸರ್ವೇ ನಂಬರ್ 78 ರಲ್ಲಿರುವ ಗೋಮಾಳ ಪ್ರದೇಶದಲ್ಲಿ ಹಕ್ಕಿಪಿಕ್ಕಿ ಸಮುದಾಯದ ವಸತಿ ರಹಿತರಿಗೆ 4 ಎಕರೆ ಮಂಜೂರು ಮಾಡಿರುವ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಅಕ್ಷರಶಃ ಈ ಪ್ರಕರಣ ಕಗ್ಗಂಟ್ಟಾಗಿ ಪರಿಣಮಿಸುತ್ತಿದೆ.
ಇತ್ತೀಚೆಗಷ್ಟೆ ಗೋಮಾಳ ಮಂಜೂರು ಮಾಡಿರುವ ಕ್ರಮ ವಿರೋಧಿಸಿ ಬೆನವಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಈ ನಡುವೆಯೇ ಹಕ್ಕಿಪಿಕ್ಕಿ ಸಮುದಾಯದ ಕೆಲವರು ರಾತ್ರೋರಾತ್ರಿ ವೀರಣ್ಣನ ಬೆನವಳ್ಳಿ ಗ್ರಾಮದಲ್ಲಿ ತಮಗೆ ಮಂಜೂರಾಗಿದ್ದ ಗೋಮಾಳ ಪ್ರದೇಶದಲ್ಲಿ ಗುಡಿಸಲುಗಳನ್ನು ಹಾಕಿಕೊಂಡಿದ್ದರು. ಇದರ ಬೆನ್ನಲ್ಲೆ ಹಕ್ಕಿಪಿಕ್ಕಿ ಸಮುದಾಯದ ಮತ್ತೊಂದು ಗುಂಪು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಗರದ ಜಿಪಂ ಕಚೇರಿ ಆವರಣದಲ್ಲಿ ಧರಣಿ ನಡೆಸಿತು.
ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರದವರು ಜೋಪಡಿ-ಗುಡಿಸಲು ಹಾಕಿಕೊಂಡಿದ್ದು, ತಕ್ಷಣವೇ ತೆರವುಗೊಳಿಸಬೇಕು. ನಾವೇ ನಿಜವಾದ ಫಲಾನುಭವಿಗಳಾಗಿದ್ದು, ನಿವೇಶನ ವಿತರಣೆ ಮಾಡಬೇಕು ಎಂದು ಸಿಇಒಗೆ ಒತ್ತಾಯಿಸಿದ್ದಾರೆ.
ಸಂಘಟನೆಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ನೇತೃತ್ವದಲ್ಲಿ ಧರಣಿ ನಡೆಯಿತು. ಕೆಲ ಸ್ವಯಂಘೋಷಿತ ಮುಖಂಡರು ಹಕ್ಕಿಪಿಕ್ಕಿ ಜನಾಂಗದವರಿಗೆ ವಂಚಿಸುತ್ತಾ ಇತರೆ ಜಾತಿ, ಧರ್ಮದವರಿಗೆ ಪ್ರಸ್ತುತ ಮಂಜೂರಾಗಿರುವ ಗೋಮಾಳ ಪ್ರದೇಶದಲ್ಲಿ ನಿವೇಶನ ಕೊಡಿಸಲು ಯತ್ನಿಸುತ್ತಿದ್ದಾರೆ. ಇಂತಹವರನ್ನು ಪತ್ತೆ ಹಚ್ಚಿ ಶಿಸ್ತು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಸಂಘಟನೆಯ ಮುಖಂಡರಾದ ಟಿ.ಎಚ್.ಹಾಲೇಶಪ್ಪ, ಹರಿಗೆ ರವಿ, ರಮೇಶ್ ಚಿಕ್ಕಮರಡಿ, ಗೋವಿಂದ, ಲಕ್ಷ್ಮಣ್ ಸೇರಿದಂತೆ ಮೊದಲಾದವರಿದ್ದರು.
ಕಗ್ಗಂಟು: ವೀರಣ್ಣನ ಬೆನವಳ್ಳಿ ಗ್ರಾಮದ ಸ. ನಂ.78 ರಲ್ಲಿ ಸುಮಾರು 89 ಎಕರೆ ಗೋಮಾಳ ಪ್ರದೇಶವಿದೆ. ಇದರಲ್ಲಿ ಇತ್ತೀಚೆಗೆ ಜಿಲ್ಲಾಡಳಿತವು 4 ಎಕರೆಯನ್ನು ಹಕ್ಕಿಪಿಕ್ಕಿ ಸಮುದಾಯದವರಿಗೆ, 9 ಎಕರೆ ಸ್ಥಳೀಯ ವಸತಿ ರಹಿತ ಗ್ರಾಮಸ್ಥರಿಗೆ, 20 ಎಕರೆಯನ್ನು ಸರಕಾರಿ ಇಲಾಖೆ ಕಟ್ಟಡಗಳಿಗೆ, 10 ಎಕರೆ ಜಾಗವನ್ನು ಕಂದಾಯ ಇಲಾಖೆಗೆ ಸೇರಿದಂತೆ ಒಟ್ಟಾರೆ 43 ಎಕರೆ ಭೂಮಿ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಉಳಿದ ಗೋಮಾಳ ಪ್ರದೇಶದಲ್ಲಿ ಸಾಕಷ್ಟು ಭಾಗ ಒತ್ತುವರಿಯಾಗಿದೆ. ತೋಟ, ಗದ್ದೆಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ತಾಲೂಕು ಆಡಳಿತದ ಉನ್ನತ ಮೂಲಗಳು ಮಾಹಿತಿ ನೀಡುತ್ತವೆ. ಹಕ್ಕಿಪಿಕ್ಕಿ ಸಮುದಾಯದಲ್ಲಿರುವ ವಸತಿ ರಹಿತರ ಸಂಖ್ಯೆಯೆಷ್ಟು?, ಯಾರಿಗೆ ವಸತಿ ಕಲ್ಪಿಸಬೇಕು?, ಯಾವ ಮಾನದಂಡ ಅನುಸರಿಸಬೇಕು? ಎಂಬಿತ್ಯಾದಿ ವಿಷಯಗಳ ಬಗ್ಗೆ ಜಿಲ್ಲಾಡಳಿತವಾಗಲಿ ಅಥವಾ ತಾಲೂಕು ಆಡಳಿತವಾಗಲಿ ಯಾವುದೇ ಪೂರ್ವಭಾವಿ ಮುನ್ನೆಚ್ಚರಿಕೆ ಕ್ರಮಗಳನ್ನು ಮಾಡಿಕೊಂಡಿಲ್ಲ. ಏಕಾಏಕಿ ಭೂಮಿ ಮಂಜೂರು ಮಾಡಿ ಗೊಂದಲ ಸೃಷ್ಟಿಯಾಗುವಂತೆ ಮಾಡಿದೆ. ಇದರಿಂದ ಈ ಪ್ರಕರಣ ಕಗ್ಗಂಟ್ಟಾಗಿ ಪರಿಣಮಿಸುವಂತಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ತಾಲೂಕು ಆಡಳಿತದ ಅಧಿಕಾರಿಯೋರ್ವರು ಹೇಳುತ್ತಾರೆ.







