ಈಶ್ವರಪ್ಪ ಪಕ್ಷದ ಶಿಸ್ತಿನ ಸಿಪಾಯಿ, ಬ್ರಿಗೇಡ್ ಗೂ ಪಕ್ಷಕ್ಕೂ ಸಂಬಂಧವಿಲ್ಲ: ಈಶ್ವರಪ್ಪರ ಪುತ್ರ ಕಾಂತೇಶ್ ಹೇಳಿಕೆ

ಶಿವಮೊಗ್ಗ, ಮೇ. 2: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೂ ರಾಜಕೀಯಕ್ಕೂ ಸಂಬಂಧವೇ ಇಲ್ಲ. ಸಂಘಟನೆ ಸಶಕ್ತಗೊಳಿಸುವ ನಿಟ್ಟಿನಲ್ಲಿ ಕೆ.ಎಸ್.ಈಶ್ವರಪ್ಪನವರು ಕೆಲಸ ಮಾಡುತ್ತಿದ್ದು, ಸಂಘಟನೆಯ ಸೂಚನೆಯನ್ನು ಪಾಲಿಸುತ್ತಿದ್ದಾರೆ. ಈಶ್ವರಪ್ಪ ಪಕ್ಷದ ಶಿಸ್ತಿನ ಸಿಪಾಯಿ ಎಂದು ಕೆ.ಎಸ್.ಈಶ್ವರಪ್ಪರ ಪುತ್ರ, ಜಿಪಂ ಸದಸ್ಯ ಕೆ.ಇ.ಕಾಂತೇಶ್ ಹೇಳಿದ್ದಾರೆ.
ಪ್ರಸ್ತುತ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರನ್ನು ವಿಶ್ವಾಸಕ್ಕೆಪಡೆದು, ಪಕ್ಷವನ್ನು ಒಟ್ಟಾಗಿ ಮುನ್ನಡೆಸಬೇಕಾದ ಗುರುತರ ಜವಾಬ್ದಾರಿ ಪಕ್ಷದ ಎಲ್ಲ ನಾಯಕರ ಮೇಲಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೂ ರಾಜಕೀಯಕ್ಕೂ ಸಂಬಂಧವೇ ಇಲ್ಲ. ಈಗಾಗಲೇ ಇದನ್ನು ಈಶ್ವರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಬ್ರಿಗೇಡ್‌ನ ಕಾರ್ಯಚಟುವಟಿಕೆಗಳು ಕೂಡ ರಾಜಕೀಯೇತರವಾಗಿವೆ ಎಂದು ತಿಳಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪರವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಇದರಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯದ ಪ್ರಶ್ನೆಯೇ ಇಲ್ಲ. ಬಿ.ಎಸ್.ವೈ. ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.





