ಶಾಸಕರ ಸ್ವಂತ ಗ್ರಾಪಂಯಲ್ಲೇ ಶುದ್ದ ಕುಡಿಯುವ ನೀರಿನ ಘಕಟ ಕೈಕೊಡುತ್ತಿದ್ದರೂ ಪರಿಹಾರವಿಲ್ಲ

ಬಾಗೇಪಲ್ಲಿ, ಮೇ. 2 ;ತಾಲೂಕಿನ ಹೋಬಳಿ ಕೇಂದ್ರ ಸ್ಥಾನ ಗೂಳೂರು ಗ್ರಾಮದಲ್ಲಿ ಕುಡಿಯುವ ನೀರಿನ ಶುದ್ದಿಕರಣ ಘಟಕ ನಾದುರಸ್ತಿಯಾಗಿ ಹಲವು ದಿನಗಳು ಕಳೆದರು ಸಂಬಂದಪಟ್ಟ ಅಧಿಕಾರಿಗಳು ದುರಸ್ತಿ ಮಾಡುವ ಗೋಜಿಗೆ ಹೋಗುತ್ತಿಲ್ಲವಾದ್ದರಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಆಹಾಕಾರ ಉಂಟಾಗಿದೆ.
ಗ್ರಾಮದಲ್ಲಿ 1800 ವಾಸದ ಮನೆಗಳಿದ್ದು 3000 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಗ್ರಾಮದಲ್ಲಿ ಎರಡು ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಿ ಹಲವು ವರ್ಷಗಳು ಕಳೆದಿದೆ.ಸರಕಾರದಿಂದ ಮಂಜೂರಾಗಿರುವ ಈ ಶುದ್ದ ಕುಡಿಯುವ ನೀರಿನ ಘಟಕ ಅಗ್ಗಾಗ್ಗೆ ಕೈಕೊಡುತ್ತಲೇ ಇದೆ. ಇದನ್ನು ನಿರ್ವಹಣೆ ಮಾಡುವವರು ತುಂಬ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಜಟಿಲವಾಗುತ್ತಿದೆ.
ಇದು ಶುದ್ದ ಕುಡಿಯುವ ನೀರಿನ ಘಟಕವಾದರು, ಈ ನೀರಿನಲ್ಲಿ ಪ್ಲೋರೈಡ್ ಅಂಶ ಶೇ. 100ಕ್ಕಿಂತಲೂ ಅಧಿಕವಾಗಿರುತ್ತದೆ. ಸ್ವಸ್ತಿ ಸ್ವಯಂ ಸೇವಾ ಸಂಸ್ಥೆಯಿಂದ ನಿರ್ಮಾಣ ಮಾಡಿರುವ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಪ್ಲೋರೈಡ್ ಅಂಶ ಶೇ.25ಕ್ಕಿಂತಲೂ ಕಡಿಮೆ ಇರುತ್ತದೆ.ಸಾಮಾನ್ಯವಾಗಿ ಗೂಳೂರು ಗ್ರಾಮದ ಸುತ್ತಮುತ್ತಲೂ ಯಾವುದೆ ಕೊಳವೆ ಬಾವಿಯಲ್ಲಿ ಶೇ.800ಕ್ಕಿಂತ ಹೆಚ್ಚು ಪ್ಲೋರೈಡ್ ಅಂಶ ಇರುತ್ತದೆ ಎಂದು ಅಂಕಿ ಅಂಶಗಳಿಂದ ತಿಳಿಯುತ್ತದೆ.
ಗ್ರಾಮಸ್ಥರಿಗೆ ಶುದ್ದ ಕುಡಿಯುವ ಸರಬರಾಜು ಮಾಡುವ ಉದ್ದೇಶದಿಂದ ಸರಕಾರ ಲಕ್ಷಾಂತರರೂಗಳ ಅನುದಾನ ಬಿಡುಗಡೆ ಮಾಡಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಿದೆ.ಪೊಲೀಸ್ ಹೊರ ಠಾಣೆ ಮುಂಭಾಗ ಇರುವ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಸರಬರಾಜು ಆಗುತ್ತಿರುವ ನೀರಿನಲ್ಲಿ ಪ್ಲೋರೈಡ್ ಅಂಶ ಇರುವ ಬಗ್ಗೆ ಗೊತ್ತಿದ್ದರು ಸಹ ಈ ನೀರನ್ನೇ ಗ್ರಾಮಸ್ಥರಿಗೆ ಸರಬರಾಜು ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ.
ಬಾಬಯ್ಯ ಗುಡಿ ಪಕ್ಕದಲ್ಲಿರುವ ಸ್ವಸ್ತಿ ಸ್ವಯಂ ಸೇವಾ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಘಟಕದಲ್ಲಿ ನೀರು ಯೋಗ್ಯವಾಗಿರುವುದರಿಂದ ಪ್ರತಿದಿನ ಜನಸಂದಣಿ ಹೆಚ್ಚಾಗಿರುತ್ತದೆ. ಜತೆಗೆ ಸುತ್ತಮುತ್ತಲು ಇರುವ ಗ್ರಾಮಗಳಾದ ನಂಜಿರೆಡ್ಡಿಪಲ್ಲಿ,ನರಸಾಪುರ,ಚನ್ನರಾಯನಪಲ್ಲಿ,ಮಲಕಚೇರುವುಪಲ್ಲಿ,ಕುರುವುದಿನ್ನಪಲ್ಲಿ,ಐವಾರ್ಲಪಲ್ಲಿ,ಆಂಜನಾಪುರ,ಪಾರ್ವತಿಪುರ ಲಂಬಾಣಿ ತಾಂಡ ಇನ್ನು ಮುಂತಾದ ಹಳ್ಳಿಗಳಿಂದ ಗ್ರಾಮಸ್ಥರು ಶುದ್ದ ಕುಡಿಯುವ ನೀರು ಪಡೆಯಲು ಜಮಾಯಿಸುತ್ತಾರೆ.
ಶಾಸಕರ ಸ್ವಂತ ಗ್ರಾಪಂನಲ್ಲೇ ಶುದ್ದ ಕುಡಿಯುವ ನೀರಿನ ಘಕಟ ಕೈಕೊಡುತ್ತಿದ್ದರೂ ಶಾಶ್ವತವಾಗಿ ದುರಸ್ತಿ ಮಾಡುವ ಸಾಹಸಕ್ಕೆ ಕೈಹಾಕುತ್ತಿಲ್ಲ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ತಕ್ಷಣ ಶುದ್ದ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.







