ಕೊರಗರ ಮೇಲಿನ ಹಲ್ಲೆ ಪ್ರಕರಣ: ನ್ಯಾಯಾಲಯಕ್ಕೆ ಶರಣಾದ ಎಲ್ಲಾ ಆರೋಪಿಗಳಿಗೆ ಜಾಮೀನು

ಉಡುಪಿ, ಮೇ 2: ಮೊವಾಡಿ ಗ್ರಾಮದ ಗಾಣದಮಕ್ಕಿ ಕೊರಗ ಕಾಲನಿಯಲ್ಲಿ ಗೋಮಾಂಸ ಸೇವನೆ ಆರೋಪ ಹೊರಿಸಿ ಕೊರಗ ಸಮುದಾಯದ ಯುವಕರಿಗೆ ಹಲ್ಲೆ ನಡೆಸಿ, ಗ್ರಾಪಂ ಸದಸ್ಯೆಗೆ ಜಾತಿನಿಂದನೆ ಮಾಡಿ, ಬೆದರಿಕೆಯೊಡ್ಡಿರುವ ಎಲ್ಲ 11 ಮಂದಿ ಆರೋಪಿಗಳಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡಿದೆ.
ತಲೆಮರೆಸಿಕೊಂಡಿದ್ದ ಪ್ರಕರಣದ ಆರೋಪಿಗಳಾದ ಸುನೀಲ್ ಪೂಜಾರಿ, ಚಂದ್ರಕಾಂತ ಪೂಜಾರಿ, ಗುರುರಾಜ್ ಆಚಾರ್ಯ, ಧೀರಜ್, ವಿನಯ್, ಸತೀಶ್, ಲಕ್ಷ್ಮಿಕಾಂತ್, ಶ್ರೀಕಾಂತ್, ಪ್ರಸನ್ನ, ಭರತ್, ಶರತ್ ಎಂಬವರು ಇಂದು ನೇರವಾಗಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಶರಣಾದ ಎಲ್ಲ ಆರೋಪಿಗಳಿಗೆ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ. ಇವರು ಎ.25ರಂದು ಮಧ್ಯರಾತ್ರಿ ವೇಳೆ ಗೋಮಾಂಸ ಭಕ್ಷಣೆ ಆರೋಪ ಹೊರಿಸಿ ಕೊರಗ ಕಾಲನಿಯ ಶಕುಂತಲಾ ಅವರ ಮನೆಗೆ ನುಗ್ಗಿ ಕೊರಗ ಸಮುದಾಯದ ಹರೀಶ್, ಮಹೇಶ್, ಶ್ರೀಕಾಂತ್ ಎಂಬವರಿಗೆ ಹಲ್ಲೆ ಮಾಡಿ ಬೆದರಿಕೆಯೊಡ್ಡಿ ಜಾತಿನಿಂದನೆ ಮಾಡಿದ್ದರು. ಇವರ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ 143, 147, 148, 448, 323, 506, 324, 504 ಜೊತೆಗೆ 149 ಐಪಿಸಿ ಮತ್ತು ಕಲಂ ಎಸ್ಸಿ ಎಸ್ಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು.







