ಪಾಕ್ ಕೃತ್ಯ ನಿಸಂದಿಗ್ಧವಾಗಿ ಖಂಡನೆ ಮತ್ತು ಪ್ರತ್ಯುತ್ತರಕ್ಕೆ ಅರ್ಹ: ಭಾರತ

ಹೊಸದಿಲ್ಲಿ,ಮೇ 2: ಭಾರತೀಯ ಯೋಧರಿಬ್ಬರ ಶಿರಚ್ಛೇದನಗೈದ ಹೇಡಿತನದ ಮತ್ತು ಅಮಾನವೀಯ ಕೃತ್ಯವು ನಾಗರಿಕತೆಯ ಎಲ್ಲ ನಿಯಮಗಳನ್ನೂ ಮೀರಿದೆ ಮತ್ತು ನಿಸ್ಸಂದಿಗ್ಧ ವಾಗಿ ಖಂಡನೆ ಮತ್ತು ಪ್ರತ್ಯುತ್ತರಕ್ಕೆ ಅರ್ಹವಾಗಿದೆ ಎಂದು ಭಾರತವು ಮಂಗಳವಾರ ಸ್ಪಷ್ಟಶಬ್ದಗಳಲ್ಲಿ ಪಾಕಿಸ್ತಾನಕ್ಕೆ ತಿಳಿಸಿದೆ.
ಸೋಮವಾರ ಭಾರತೀಯ ಸೇನೆಯ ನಾಯಿಬ್ ಸುಬೇದಾರ್ ಪರಮಜೀತ್ ಸಿಂಗ್ ಮತ್ತು ಬಿಎಸ್‌ಎಫ್ ಕಾನ್‌ಸ್ಟೇಬಲ್ ಪ್ರೇಮ ಸಾಗರ್ ಅವರನ್ನು ಬರ್ಬರವಾಗಿ ಹತ್ಯೆಗೈಯಲಾಗಿತ್ತು. ಸೇನೆಯು ಈ ಅಮಾನುಷ ಕೃತ್ಯದ ಪ್ರತೀಕಾರಕ್ಕೆ ಪಣತೊಟ್ಟಿದೆ. ಈ ಯೋಧರನು ಬಲಿ ತೆಗೆದುಕೊಂಡ ಪಾಕಿಸ್ತಾನದ ಗಡಿ ಕಾರ್ಯ ಪಡೆ ಅಥವಾ ‘ ಬ್ಯಾಟ್ ’ ಸೈನಿಕರು ಮತ್ತು ಭಯೋತ್ಪಾದಕರನ್ನು ಒಳಗೊಂಡಿದೆ ಎಂದು ಬಿಎಸ್‌ಎಫ್ ಹೇಳಿದೆ.
ಉಭಯ ರಾಷ್ಟ್ರಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕರ ನಡುವೆ ಹಾಟ್‌ಲೈನ್ ಮೂಲಕ ನಡೆದ ಮಾತುಕತೆಗಳ ವೇಳೆ ಭಾರತವು ನಿಯಂತ್ರಣ ರೇಖೆಯ ಸಮೀಪವೇ ಪಾಕಿಸ್ತಾನಿ ಬ್ಯಾಟ್ ತರಬೇತಿ ಶಿಬಿರಗಳಿರುವ ಬಗ್ಗೆ ತನ್ನ ಕಳವಳಗಳನ್ನು ವ್ಯಕ್ತಪಡಿಸಿದೆ.
ಪಾಕಿಸ್ತಾನದ ಈ ದಾಳಿಯು ಚೆನ್ನಾಗಿ ರೂಪಿಸಲಾಗಿದ್ದ ಯೋಜನೆಯಾಗಿತ್ತು ಎಂದಿರುವ ಭಾರತವು, ಇದಕ್ಕೆ ಪೂರ್ವಭಾವಿಯಾಗಿ ಪಾಕಿಸ್ತಾನಿ ಸೇನೆಯು ನಾಲ್ಕು ಭಾರತೀಯ ಸೇನಾನೆಲೆಗಳ ಮೇಲೆ ಗುಂಡು ಹಾರಾಟ ನಡೆಸಿದ್ದನ್ನು ಬೆಟ್ಟು ಮಾಡಿದೆ.
ಕೊಲ್ಲ್ಲಲ್ಪಟ್ಟ ಯೋಧರು ಪಾಕಿಸ್ತಾನಿ ಸೇನೆಯು ಕದನ ವಿರಾಮವನ್ನು ಉಲ್ಲಂಘಿಸಿ ಎಲ್ಲ ಕಡೆಗಳಿಂದಲೂ ಗುಂಡಿನ ದಾಳಿ ಆರಂಭಿಸಿದಾಗ ನಿಯಂತ್ರಣ ರೇಖೆಯಲ್ಲಿ ಗಸ್ತು ಕರ್ತವ್ಯದಲ್ಲಿದ್ದರು. ಗಸ್ತು ತಂಡದ ಇತರ ಸದಸ್ಯರು ರಕ್ಷಣೆಗಾಗಿ ಸುರಕ್ಷಿತ ಸ್ಥಳಕ್ಕೆ ಧಾವಿಸಿದಾಗ ಪರಮಜೀತ್ ಸಿಂಗ್ ಮತ್ತು ಪ್ರೇಮಸಾಗರ್ ಹಿಂದೆ ಬಿದ್ದಿದ್ದರು. ಈ ವೇಳೆ ನಿಯಂತ್ರಣ ರೇಖೆಯಿಂದ 200 ಮೀ.ಗಳಷ್ಟು ಒಳಗೆ ನುಗ್ಗಿದ್ದ ಬ್ಯಾಟ್ ತಂಡವು ಅವರಿಬ್ಬರನ್ನೂ ಕೊಂದು ರುಂಡಗಳನ್ನು ಕತ್ತರಿಸಿ ಪರಾರಿಯಾಗಿತ್ತು ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಬ್ಯಾಟ್ ಸೈನಿಕರು ಮತ್ತು ಮುಜಾಹಿದೀನ್‌ಗಳಿರುವ ತಂಡವಾಗಿದೆ ಎಂದು ಬಿಎಸ್‌ಎಫ್‌ನ ವೆಸ್ಟರ್ನ್ ಕಮಾಂಡ್‌ನ ಎಡಿಜಿ ಕೆ.ಕೆ.ಚೌಬೆ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಪಾಕಿಸ್ತಾನಿ ಸೇನೆಯ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರು ನಿಯಂತ್ರಣ ರೇಖೆಗೆ ಭೇಟಿ ನೀಡಿ ಮರಳಿದ ಬೆನ್ನಲ್ಲೇ ಈ ಘಟನೆ ನಡೆದಿದೆ ಎಂದೂ ಅವರು ತಿಳಿಸಿದರು.
ಗಡಿಯಾಚೆಯ ಪಾಕಿಸ್ತಾನಿ ನೆಲೆಗಳ ಮೇಲೆ ಮಾರ್ಟರ್ ಬಾಂಬ್‌ಗಳು ಮತ್ತು ಗ್ರೆನೇಡ್‌ಗಳ ಮೂಲಕ ಭಾರತೀಯ ಸೆನೆಯು ಪ್ರತಿದಾಳಿ ನಡೆಸಿದೆ.
ಈ ಘಟನೆಯಲ್ಲಿ ತನ್ನ ಕೈವಾಡವಿರುವುದನ್ನು ನಿರಾಕರಿಸಿರುವ ಪಾಕ್ ಸೇನೆಯು, ತನ್ನದು ಅತ್ಯಂತ ವೃತ್ತಿಪರ ಪಡೆಯಾಗಿದೆ ಮತ್ತು ತಾನು ಸೈನಿಕರನ್ನು....ಭಾರತೀಯ ಸೈನಿಕರನ್ನೂ ಅವಮಾನಿಸುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.