ಮೊಬೈಲ್ ಟವರ್ ವಿಕಿರಣ ಭೀತಿ ಬೇಡ: ಮನೋಜ್ ಸಿನ್ಹಾ

ಹೊಸದಿಲ್ಲಿ,ಮೇ 2: ಮೊಬೈಲ್ ಟವರ್‌ಗಳಿಂದ ವಿಕಿರಣದ ಬಾಧೆಯುಂಟಾಗುತ್ತದೆಯೆಂಬ ಭೀತಿಗಳನ್ನು ಇಂದಿಲ್ಲಿ ತಳ್ಳಿಹಾಕಿರುವ ಕೇಂದ್ರ ಸಂಪರ್ಕ ಸಚಿವ ಮನೋಜ್ ಸಿನ್ಹಾ, ವಿಕಿರಣ ಮಾಲಿನ್ಯತೆಗೆ ಸಂಬಂಧಿಸಿ ಭಾರತವು ಜಾಗತಿಕ ಮಟ್ಟದ ಮಾನದಂಡಕ್ಕಿಂತ 10 ಪಟ್ಟು ಅಧಿಕವಿರುವ ಕಠಿಣವಾದ ನಿಯಮಗಳನ್ನು ಹೊಂದಿದೆಯೆಂದು ಹೇಳಿದ್ದಾರೆ ಹಾಗೂ ದೇಶದಲ್ಲಿ ದೂರಸಂಪರ್ಕ ವ್ಯವಸ್ಥೆಯನ್ನು ಉತ್ತಮಗೊಳಿಸಲು ಇನ್ನೂ ಹಲವಾರು ಮೊಬೈಲ್ ಗೋಪುರಗಳ ಅಗತ್ಯವಿದೆಯೆಂದು ತಿಳಿಸಿದ್ದಾರೆ.
‘‘ಕಾಲ್‌ಡ್ರಾಪ್ ಸಮಸ್ಯೆ ಇಲ್ಲದಂತೆ ಮಾಡಬೇಕೆಂದು ನಾವು ಯಾವಾಗಲೂ ಮಾತಾಡುತ್ತಿರುತ್ತೇವೆ. ಆದರೆ ನಮ್ಮ ಮನೆ ಸಮೀಪ ಮೊಬೈಲ್ ಟವರ್ ಇರುವುದನ್ನು ನಾವು ಬಯಸುವುದಿಲ್ಲ ಎಂದು ಸಚಿವರು ತಿಳಿಸಿದರು. ಅವರು ಮಂಗಳವಾರ ಹೊಸದಿಲ್ಲಿಯಲ್ಲಿ ಕೇಂದ್ರ ದೂರಸಂಪರ್ಕ ಇಲಾಖೆಯು ಆರಂಭಿಸಿರುವ ತರಂಗ್ ಸಂಚಾರ್ ವೆಬ್‌ಪೋರ್ಟಲ್‌ನ್ನು ಉದ್ಘಾಟಿಸಿ ಮಾತನಾಡುತ್ತಿದ್ದುರ.
ಮೊಬೈಲ್ ಟವರ್‌ಗಳು ಹಾಗೂ ವಿದ್ಯುನ್ಮಾನ-ಕಾಂತಿ ಕ್ಷೇತ್ರ (ಇಎಂಎಫ್)ದ ಹೊರಸೂಸುವಿಕೆ ಕುರಿತಾದ ಮಾಹಿತಿಗಳನ್ನು ಈ ವೆಬ್‌ಸೈಟ್ ಮೂಲಕ ಸಾರ್ವಜನಿಕರಿಗೆ ನೀಡಲಾಗುವುದು ಎಂದವರು ಹೇಳಿದರು.
ಜನರಿಗೆ ಒಂದು ವಿಷಯದ ಬಗ್ಗೆ ತಿಳುವಳಿಕೆಯಿಲ್ಲದೆ ಇದ್ದಲ್ಲಿ ಅವರು ವದಂತಿಗಳನ್ನು ಹರಡುತ್ತಾರೆಂದು ಅಭಿಪ್ರಾಯಿಸಿದ ಸಚಿವರು, ದೇಶವು ಉತ್ತಮ ಸಂಪರ್ಕಶೀಲತೆಯನ್ನು ಹೊಂದುವ ಅಗತ್ಯವಿದೆಯೆಂದರು.
ವಿಕಿರಣದಿಂದ ಮಾನವ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮವಿಲ್ಲ. ಕಳೆದ 30 ವರ್ಷಗಳಿಂದ ವಿಶ್ವ ಆರೋಗ್ಯ ಸಂಸ್ಥೆಯು ಈ ವಿಷಯವಾಗಿ 25 ಸಾವಿರ ಅಭಿಯಾನಗಳನ್ನು ನಡೆಸಿದೆ ಹಾಗೂ ಮೊಬೈಲ್ ಟವರ್‌ಗಳಿಂದ ಮಾನವ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವುಂಟಾಗುವುದೆಂದು ಅದು ಎಂದೂ ಹೇಳಿಲ್ಲ ಎಂಬುದಾಗಿ ಸಚಿವರು ತಿಳಿಸಿದರು.
‘ತರಂಗ್ ಸಂಚಾರ್’ನ ಆರಂಭಗೊಂದಿಗೆ, ಮೊಬೈಲ್ ಟವರ್‌ಗಳು ಹಾಗೂ ಇಎಂಎಫ್ ಹೊರಸೂಸುವಿಕೆಯ ಬಗ್ಗೆ ಜನರಲ್ಲಿರುವ ತಪ್ಪುಗ್ರಹಿಕೆಗಳು ದೂರವಾಗಲಿದೆಯೆಂದು ಸಿನ್ಹಾ ಹೇಳಿದರು. ಈ ವೆಬ್‌ಸೈಟ್ ಮೂಲಕ ಪ್ರತಿಯೊಬ್ಬ ಶ್ರೀಸಾಮಾನ್ಯನಿಗೂ ನಿರ್ದಿಷ್ಟ ಪ್ರದೇಶದಲ್ಲಿರುವ ಮೊಬೈಲ್ ಟವರ್‌ಗಳು ಹಾಗೂ ಅವು ಸರಕಾರವು ನಿಗದಿಪಡಿಸಿದ ಇಎಂಎಫ್ ಹೂರಸೂಸುವಿಕೆಯ ನಿಯಮಗಳನ್ನು ಅನುಸರಿಸುತ್ತಿವೆಯೇ ಎಂಬ ಬಗ್ಗೆ ಮಾಹಿತಿಯನ್ನು ಪಡೆದಕೊಳ್ಳಬಹುದಾಗಿದೆಯೆಂದು ಸಚಿವ ಮನೋಜ್ ಸಿನ್ಹಾ ತಿಳಿಸಿದರು.
ಬಳಕೆದಾರರು ಕೋರಿದಲ್ಲಿ, ಯಾವುದೇ ಮೊಬೈಲ್ ಟವರ್‌ನ ನಿವೇಶನದ ಬಗ್ಗೆ ಮಾಹಿತಿಯನ್ನು ಅವರಿಗೆ ಇಮೇಲ್ ಮೂಲಕ ಕಳುಹಿಸಲಾಗುವುದೆಂದು ಸಿನ್ಹಾ ಹೇಳಿದರು.