‘ಪ್ರತೀಕಾರವಾಗಿ 50 ಪಾಕಿಗಳ ತಲೆಗಳು ಬೇಕು’: ಹತ ಯೋಧ ಪ್ರೇಮಸಾಗರ್ ಪುತ್ರಿಯ ಗರ್ಜನೆ

ಹೊಸದಿಲ್ಲಿ,ಮೇ 2: ಸೋಮವಾರ ಬೆಳಿಗ್ಗೆ ಜಮ್ಮು-ಕಾಶ್ಮೀರದ ಪೂಂಚ್ ವಿಭಾಗದ ನಿಯಂತ್ರಣ ರೇಖೆಯಲ್ಲಿ ಇಬ್ಬರು ಭಾರತೀಯ ಯೋಧರನ್ನು ಕೊಂದು ಶಿರಚ್ಛೇದನಗೈದ ಪಾಕಿಸ್ತಾನದ ಕೃತ್ಯಕ್ಕೆ ಭಾರತೀಯ ಸೇನೆಯು ಹೇಗೆ ಸೇಡು ತೀರಿಸಿಕೊಳ್ಳಬೇಕು ಎನ್ನುವುದರ ಕುರಿತಂತೆ ಉತ್ತರಪ್ರದೇಶದ ಪುಟ್ಟಗ್ರಾಮವೊಂದರ ಯುವತಿ ಸ್ಪಷ್ಟ ನಿಲುವು ಹೊಂದಿದ್ದಾಳೆ. ‘‘ನನ್ನ ತಂದೆ ಹುತಾತ್ಮರಾಗಿದ್ದಾರೆ. ಅವರ ಬಲಿದಾನಕ್ಕೆ ಪ್ರತಿಯಾಗಿ ನನಗೆ 50 ಪಾಕಿಗಳ ತಲೆಗಳು ಬೇಕು ’’ಎಂದು ಹತ ಯೋಧರಲ್ಲೋರ್ವರ ಪೈಕಿ ಬಿಎಸ್‌ಎಫ್ ಕಾನ್‌ಸ್ಟೇಬಲ್ ಪ್ರೇಮ್ ಸಾಗರ್ ಅವರ ಪುತ್ರಿ ಸರೋಜ್ ಗರ್ಜಿಸಿದ್ದಾರೆ.
ದೇವರಿಯಾ ಜಿಲ್ಲೆಯ ತಾಕೆನ್‌ಪುರ ನಿವಾಸಿ ಸಾಗರ್ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಹೆಲಿಕಾಪ್ಟರ್ ಮೂಲಕ ಅವರ ಗ್ರಾಮಕ್ಕೆ ತಂದು ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು.
ಇನ್ನೋರ್ವ ಹತ ಯೋಧ ಪರಮಜೀತ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಪಂಜಾಬ್‌ನ ಅವರ ಹುಟ್ಟೂರು ತರನ್ ತರನ್‌ಗೆ ಒಯ್ಯಲಾಗಿದ್ದು, ಶವವನ್ನು ಕಣ್ಣಾರೆ ನೋಡದ ಹೊರತು ಅಂತಿಮ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ದುಃಖತಪ್ತ ಬಂಧುಗಳು ಪಟ್ಟು ಹಿಡಿದಿದ್ದರು. ಶವಪೆಟ್ಟಿಗೆಯಲ್ಲಿರುವ ಶವವನ್ನು ತಮಗೆ ಏಕೆ ತೋರಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದರು. ಹಿರಿಯ ಅಧಿಕಾರಿಗಳು ಸಮಾಧಾನ ಹೇಳಿದ ಬಳಿಕ ಅಂತಿಮ ಸಂಸ್ಕಾರ ಸಾಂಗವಾಗಿ ನಡೆಯಿತು.







