ಸ್ವಂತ ಕಟ್ಟಡವಿಲ್ಲದೆ ಅಂಚೆ ಕಚೇರಿ ಸ್ಥಳಾಂತರ,ಗ್ರಾಹಕರ ಪರದಾಟ

ಬಾಗೇಪಲ್ಲಿ, ಮೇ.30: ಸ್ವಾತಂತ್ರ್ಯಪೂರ್ವದಿಂದಲ್ಲೂ ಗ್ರಾಹಕರ ಸೇವೆ ಸಲ್ಲಿಸುತ್ತಿರುವ ಅಂಚೆ ಕಚೇರಿಗೆ ಸ್ವಂತ ಕಟ್ಟಡವಿಲ್ಲದ ಪರಿಣಾಮ ಪ್ರತಿ 3-4 ವರ್ಷಗಳಿಗೆ ಒಮ್ಮೆ ಕಟ್ಟಡದಿಂದ ಕಟ್ಟಡಕ್ಕೆ ಸ್ಥಳಾಂತರಿಸುವುದರಿಂದ ಗ್ರಾಹಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಸುಮಾರು 30 ವರ್ಷಗಳ ಹಿಂದೆ ಪುರಸಭೆಯವತಿಯಿಂದ ಬಾಗೇಪಲ್ಲಿ ಪಟ್ಟಣದಲ್ಲಿ ಅಂಚೆ ಕಛೇರಿ ನಿರ್ಮಿಸುವ ನಿಟ್ಟನಲ್ಲಿ ಖಾಲಿ ನಿವೇಶವನ್ನು ಪಡೆದು ಇದುವರವಿಗು ಕಛೇರಿ ನಿರ್ಮಿಸದೆ ಖಾಲಿ ನಿವೇಶನವನ್ನು ಉಳಿಸಿಕೊಂಡಿರುವ ನಿಟ್ಟಿನಲ್ಲಿ ಈ ಖಾಲಿ ನಿವೇಶನವು ಇಂದು ಕಸದ ತೊಟ್ಟಿಯಾಗಿ ಪರಿವರ್ತನೆಗೊಂಡಿದೆ.
ಜಿಲ್ಲೆಯ ಬಹುತೇಕ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿಯೂ ಅಂಚೆ ಕಛೇರಿ ಸ್ವಂತ ಕಟ್ಟಡವನ್ನು ಹೊಂದಿದೆ ಆದರೆ ಬಾಗೇಪಲ್ಲಿ ತಾಲ್ಲೂಕು ಕೇಂದ್ರದಲ್ಲಿ ಕಛೇರಿ ಸ್ವಂತ ಸ್ಥಳವಿದ್ದರು ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುವಂತಹ ಪರಿಸ್ಥಿತಿ ಇದೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎನ್ನುತ್ತಾರೆ ಸಾರ್ವಜನಿಕರು.
ಅಂಚೆ ಕಛೇರಿಯು ತನ್ನ ಸೇವೆಯನ್ನು ಪ್ರಾರಂಭಿಸಿದ ದಿನದಿಂದ ಇಂದಿನವರೆಗೂ ಸ್ವಂತ ಕಟ್ಟಡವಿಲ್ಲದೆ ಬಾಡಿಗೆಯ ಕಛೇರಿಗಳಲ್ಲಿಯೇ ಕಾರ್ಯನಿರ್ವಹಿಸುತ್ತಿರುವುದು ಶೋಚನೀಯವಾದ ಸಂಗತಿ. ಈ ಕಛೇರಿಯು ಪಟ್ಟಣದ ವಿವಿಧ ಸ್ಥಳಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಸಂಚಾರಿ ಅಂಚೆ ಕಚೇರಿಯಾಗಿ ಪರಿವರ್ತನೆಯಾಗಿದೆ. ಈ ರೀತಿಯಾಗಿ ಪದೆ ಪದೇ ಸ್ಥಳದಿಂದ ಸ್ಥಳಕ್ಕೆ ಬದಲಿಸುವುದರಿಂದ ಅಂಚೆ ಕಛೇರಿಗೆ ಹೆಚ್ಚಾಗಿ ಅಂಗವಿಕಲರು, ವಯೋವೃದ್ಧರು ಸರ್ಕಾರದಿಂದ ನೀಡುವಂತಹ ವಿವಿಧ ಸೌಲಭ್ಯಗಳನ್ನು ಪಡೆಯಲು ಬರುವ ಗ್ರಾಹಕರು ಪರದಾಡುವಂತಾಗಿದೆ.
ಈ ಖಾಲಿ ನಿವೇಶನದಲ್ಲಿ ಅಂಚೆ ಕಛೇರಿಗೆ ಸಂಬಂಧಿಸಿ ಯಾವುದೆ ನಾಮಫಲಕವನ್ನು ಸಹ ಹಾಕಿರುವುದಿರುವುದರಿಂದ ಈ ಆಸ್ತಿಯನ್ನು ಯಾರಾದರೂ ಮಾರಾಟಕ್ಕೆ ಇಟ್ಟರೂ ಆಶ್ಚರ್ಯಪಡುವಂತಿಲ್ಲ. ಅಂಚೆ ಇಲಾಖೆಯ ಸೇವೆಯು ಸಾರ್ವಜನಿಕರಿಗೆ ತುಂಬಾ ಅಗತ್ಯವಿರುವುದರಿಂದ ಕಛೇರಿಯನ್ನು ಸ್ಥಳದಿಂದ ಸ್ಥಳಕ್ಕೆ ಕಟ್ಟಡದಿಂದ ಕಟ್ಟಡಕ್ಕೆ ಸ್ಥಳಾಂತರ ಮಾಡದೇ ತನ್ನ ಸ್ವಂತ ನಿವೇಶನದಲ್ಲಿಯೇ ಸುಸಜ್ಜಿತವಾದ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದರು.







