ಉಪ್ಪಾರ ಜನಾಂಗದ ಅಭ್ಯರ್ಥಿಗೆ ಮಂತ್ರಿ ಸ್ಥಾನ: ಸಿದ್ದರಾಮಯ್ಯ ಭರವಸೆ
ಭಗೀರಥ ಜಯಂತಿ ಕಾರ್ಯಕ್ರಮ

ಬೆಂಗಳೂರು, ಮೇ 2: ಶೋಷಿತರ ಅಭ್ಯುದಯಕ್ಕಾಗಿ ಸಾಮಾಜಿಕ ನ್ಯಾಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ನನಗೆ ಅಲಂಕಾರಿಕ ಭಾಷೆ ಮಾತನಾಡಲು ಬರುವುದಿಲ್ಲ. ನಾನು ಅಧಿಕಾರದಲ್ಲಿರಲಿ, ಬಿಡಲಿ ಸಾಮಾಜಿಕ ನ್ಯಾಯದಲ್ಲಿ ಯಾವುದೇ ರಾಜಿ ಇಲ್ಲ. ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಒಬ್ಬೇ ಒಬ್ಬ ಉಪ್ಪಾರ ಜನಾಂಗದ ಅಭ್ಯರ್ಥಿಗೆ ಟಿಕೆಟ್ ನೀಡದಿದ್ದರೆ ಅದು ಡೋಂಗಿತನಕ್ಕೆ ಸಾಕ್ಷಿಯಾಗುತ್ತಿತ್ತು. ಅದಕ್ಕಾಗಿ ಚಾಮರಾಜನಗರದಲ್ಲಿ ಉಪ್ಪಾರ ಜನಾಂಗದ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಈ ಬಾರಿ ಶಾಸಕರಾಗಿದ್ದಾರೆ. ಮುಂದಿನ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಉಪ್ಪಾರ ಜನಾಂಗದ ಅಭ್ಯರ್ಥಿಗೆ ಮಂತ್ರಿಯ ಸ್ಥಾನಮಾನ ನೀಡುತ್ತೇನೆ" ಎಂದು ಭರವಸೆ ನೀಡಿದರು.
ಶೈಕ್ಷಣಿಕ, ಆರ್ಥಿಕ, ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಹಿಂದುಳಿದಿರುವ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಅಶಕ್ತರ ಅಭ್ಯುದಯಕ್ಕೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಬೆಂಬಲಕ್ಕೆ ನಿಲ್ಲುತ್ತದೆ. ಸರಕಾರದ ಬೆಂಬಲದ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ಬರಲು ‘ಭಗೀರಥ ಶ್ರಮ’ ಪಡಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಲೋಕಸೇವಾ ಆಯೋಗಕ್ಕೆ ಉಪ್ಪಾರ ಜನಾಂಗದ ಒಬ್ಬರನ್ನು ಸದಸ್ಯರನ್ನಾಗಿ ನೇಮಕ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು ಕೆಲವೇ ದಿನಗಳಲ್ಲಿ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಪರುಷೋತ್ತಮಾನಂದಪುರಿ ಮಹಾಸ್ವಾಮೀಜಿ, ಭೀಮಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಜಕ್ಕಪ್ಪ ಯಡವಿ, ರಾಜ್ಯ ನಿರಾಶ್ರಿತರ ಪುನರ್ ವಸತಿ ಮಾಜಿ ಅಧ್ಯಕ್ಷ ಯು.ವೆಂಕೋಬ ಸೇರಿದಂತೆ ಇತರರು ಇದ್ದರು.







