ಆಯ್ಕೆ ಮಾಡಿದ ಸ್ಥಳ, ಸಮಯದಲ್ಲಿ ಪ್ರತ್ಯುತ್ತರ: ಸೇನೆ

ಹೊಸದಿಲ್ಲಿ, ಮೇ 2: ಭಾರತೀಯ ಯೋಧರಿಬ್ಬರ ಶಿರಚ್ಛೇದನಕ್ಕಾಗಿ ಪಾಕಿಸ್ತಾನವು ಪರಿಣಾಮವನ್ನು ಎದುರಿಸಬೇಕಾಗುವುದು ಎಂದು ಭಾರತೀಯ ಸೇನಾ ಪಡೆಯ ಉಪವರಿಷ್ಠ ಶರತ್ ಚಂದ್ ಮಂಗಳವಾರ ಹೇಳಿದ್ದು, ಈ ಬರ್ಬರ ಕೃತ್ಯದ ವಿರುದ್ಧ ಭಾರತವು ತನ್ನ ಆಯ್ಕೆ ಮಾಡಿದ ಸ್ಥಳ ಹಾಗೂ ಸಮಯದಲ್ಲಿ ಸೂಕ್ತ ಪ್ರತ್ಯುತ್ತರ ನೀಡಲಿದೆಯೆಂದು ಘೋಷಿಸಿದ್ದಾರೆ.
ಇಬ್ಬರು ಬಿಎಸ್‌ಎಫ್ ಯೋಧರನ್ನು ಹತ್ಯೆಗೈದು ಅವರ ಶಿರಚ್ಛೇದನಗೈದ ಘಟನೆಯು ಪಾಕಿಸ್ತಾನದ ಹತಾಶೆಯನ್ನು ಬಿಂಬಿಸುತ್ತಿದೆಯೆಂದು ಹೇಳಿರುವ ಅವರು ಈ ಘೋರ ಕೃತ್ಯವನ್ನು ಸಮರ್ಥಿಸಲು ಅದಕ್ಕೆ ಎಂದೂ ಸಾಧ.್ಯವಿಲ್ಲವೆಂದು ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು ನಾವು ಏನು ಮಾಡಲಿದ್ದೇವೆಂದು ನಾನೀಗ ಹೇಳಲು ಬಯಸುವುದಿಲ್ಲ. ಎಂದ ಅವರು ನಾವು ಕೈಗೊಳ್ಳಲಿರುವ ಕಾರ್ಯಾಚರಣೆಯ ಸಮಯ ಹಾಗೂ ಸ್ಥಳದ ಬಗ್ಗೆ ಗಮನಹರಿಸುವುದಾಗಿ ಹೇಳಿದರು.
‘‘ಅವರು (ಪಾಕಿಸ್ತಾನಿಗಳು) ತಮ್ಮ ಪಡೆಗಳು ಹಾಗೆ ಮಾಡಿಲ್ಲವೆಂದು ಹೇಳುತ್ತಾರೆ. ಹಾಗಾದರೆ ಆ ಕೃತ.್ವವನ್ನು ಎಸಗಿದವರು ಯಾರು?. ಅವರ ಜನರು ನಮ್ಮ ಪ್ರದೇಶಕ್ಕೆ ಬಂದು ಈ ಕೃತ್ಯವೆಸಗಿದ್ದಾರೆ. ಅವರು ಅದರ ಹೊಣೆ ಹೊರಬೇಕಾಗಿದೆ ಮತ್ತು ಪರಿಣಾಮವನ್ನು ಎದುರಿಸಬೇಕಾಗಿದೆ’’ ಎಂದು ಚಾಂದ್ ತಿಳಿಸಿದ್ದಾರೆ,
ಈ ಮಧ್ಯೆ ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್ ಇಂದು ಉತ್ತರ ಕಾಶ್ಮೀರದ ಮುಂಚೂಣಿ ಗಡಿಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ಕಟ್ಟೆಚ್ಚರದಲ್ಲರುವಂತೆ ಸೇನಾಪಡೆಗಳಿಗೆ ಸೂಚನೆ ನೀಡಿದರು. ಗಡಿನಿಯಂತ್ರಣ ರೇಖೆಯಲ್ಲಿ ನಿಯೋಜಿತರಾಗಿರುವ ಕಮಾಂಡರ್‌ಗಳು ಹಾಗೂ ಸೇನಾಪಡೆಗಳ ಜೊತೆ ಸಮಾಲೋಚನೆ ನಡೆಸಿದ ಅವರು ಇಡೀ ದೇಶವು ಅವರ ಜೊತೆಗಿರುವುದಾಗಿ ಭರವಸೆ ನೀಡಿದರು.







