ಹೆದ್ದಾರಿ ದರೋಡೆಕೋರರ ಬಂಧನ

ಮಂಡ್ಯ, ಮೇ.2: ಮದ್ದೂರು ಮಳವಳ್ಳಿ ಹೆದ್ದಾರಿಯಲ್ಲಿ ಲಾರಿಗಳನ್ನು ಅಡ್ಡಗಟ್ಟಿ ಚಾಲಕ, ಕ್ಲೀನರ್‌ಗಳಿಂದ ಹಣ, ಮೊಬೈಲ್ ದೋಚುತ್ತಿದ್ದ ಏಳು ದರೋಡೆಕೋರರನ್ನು ಕೆ.ಎಂ.ದೊಡ್ಡಿ ಪೊಲೀಸರು ಬಂಧಿಸಿದ್ದಾರೆ.
ಮದ್ದೂರು ತಾಲೂಕು ಕೆ.ಶೆಟ್ಟಹಳ್ಳಿ ಗ್ರಾಮದ ಮಹೇಂದ್ರ, ದೊಡ್ಡರಸಿನಕೆರೆ ಗ್ರಾಮದ ಶ್ರೀಧರ್, ಅಭಿಷೇಕ್, ಶಿವರಾಮು, ಅರುಣ, ಚೇತನ ಹಾಗೂ ಮರೀಗೌಡ ಬಂಧಿತರಾಗಿದ್ದು, ಇಗ್ಗಲೂರಿನ ವೇಣು ಎಂಬಾತ ನಾಪತ್ತೆಯಾಗಿದ್ದಾನೆ.
ಮುಟ್ಟನಹಳ್ಳಿ ಗೇಟ್ ಪ್ರಯಾಣಕರ ತಂಗುದಾಣದಲ್ಲಿ ತಡರಾತ್ರಿ ಗಸ್ತು ಪೊಲೀಸರು ಏಳು ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಹೆದ್ದಾರಿಯಲ್ಲಿ ಲಾರಿಗಳ ದರೋಡೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಎ.21 ರಂದು ಹೆದ್ದಾರಿಯ ಬಿದರಹೊಸಹಳ್ಳಿ ಗೇಟ್ ಬಳಿ ಲಾರಿ ಅಡ್ಡಗಟ್ಟಿ ಚಾಲಕ ಹಾಗೂ ಕ್ಲೀನರ್ ಬಳಿಯಿದ್ದ 5 ಸಾವಿರ ರೂ. ಹಾಗೂ ಮೊಬೈಲ್‌ಗಳು ಮತ್ತು 22ರಂದು ದೇವರಹಳ್ಳಿ ಗೇಟ್‌ನ ಐಟಿಐ ಕಾಲೇಜು ಬಳಿ ಸಿಮೆಂಟ್ ಲಾರಿ ತಡೆದು ಚಾಲಕನಿಂದ 5 ಸಾವಿರ ರೂ. ಹಾಗೂ ಮೊಬೈಲ್ ಕಸಿದುಕೊಡಿರುವುದನ್ನು ಬಂಧಿತರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಮಳವಳ್ಳಿ ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ತಿಳಿಸಿದ್ದಾರೆ.





