ಸುಂಟಿಕೊಪ್ಪ: ಮನೆಗೆ ನುಗ್ಗಿದ ನೀರು ಅಪಾರ ನಷ್ಟ
ಸುಂಟಿಕೊಪ್ಪ, ಮೇ 2: ನಿನ್ನೆ ಸಂಜೆ ಆಕಸ್ಮಿಕವಾಗಿ ಬಂದ ಭಾರೀ ಮಳೆ ಬಿರುಗಾಳಿಗೆ ಮನೆ ಕಟ್ಟಡಗಳ ಹೆಂಚು ಹಾರಿಹೋಗಿದ್ದು ಅಲ್ಲಲ್ಲಿ ಮರಗಿಡಗಳು ಮುರಿದು ಬಿದ್ದಿದೆ ತಗ್ಗು ಪ್ರದೇಶದ ಮನೆಗೆ ನೀರು ನುಗ್ಗಿ ನಷ್ಟ ಉಂಟಾದ ಬಗ್ಗೆ ವರದಿಯಾಗಿದೆ. ಸುಂಟಿಕೊಪ್ಪ ಸೋಮವಾರ ಸಂಜೆ ಮೋಡ ಕವಿದ ವಾತವಾರಣವಿದ್ದು ಬಿರುಗಾಳಿಯೊಂದಿಗೆ ವರುಣ ಆರ್ಭಟದಿಂದ ಜನತೆ ತತ್ತರಿಸಿ ಹೋಗಿದ್ದಾರೆ.
ಸುಂಟಿಕೊಪ್ಪ ಗ್ರಾಪಂ ಕಚೇರಿಯ ಮೇಲ್ಚಾವಣಿಯ ಸುಮಾರು 150ಕ್ಕೂ ಹೆಚ್ಚು ಹೆಂಚುಗಳು ಗಾಳಿಗೆ ಹಾರಿ ಮಾರುಕಟ್ಟೆ ಆವರಣಕ್ಕೆ ಬಿದ್ದಿವೆ, ಕಚೇರಿ ಒಳಗೆ ನೀರು ಪ್ರವೇಶಿಸಿದೆ. ಇಲ್ಲಿನ ಜನತಾ ಕಾಲನಿಯ ವಿಶ್ವನಾಥ, ವಿಜಯ, ಚೆಲುವ ಹಾಗೂ ವಿನೋದ್ ಅವರ ಮನೆಗೆ ಭಾರೀ ಮಳೆಯ ಪರಿಣಾಮ ರಾಷ್ಟ್ರಿಯ ಹೆದ್ದಾರಿಯಲ್ಲಿ ಕಲುಷಿತ ಮಳೆಯ ನೀರು ಮೇಲ್ಭಾಗದಿಂದ ರಸವಾಗಿ ನೀರು ಹರಿದ ಪರಿಣಾಮ ಮನೆಗಳಿಗೆ ನುಗ್ಗಿ, ಆಹಾರ ಪದಾರ್ಥಗಳು ನೀರು ಪಾಲಾಗಿವೆ ಎಂದು ತಿಳಿದು ಬಂದಿದೆ.
ಪ್ರತಿವರ್ಷ ಮಳೆಗಾಲದಲ್ಲಿ ಜನತಾ ಕಾಲನಿ ನಿವಾಸಿಗಳು ಅವೈಜ್ಞಾನಿಕವಾಗಿ ಪಂಚಾಯತ್‌ನವರು ಚರಂಡಿ ನಿರ್ಮಿಸಿದ್ದರಿಂದ ಚರಂಡಿಯಲ್ಲಿ ಸರಾಗವಾಗಿ ನೀರು ಹರಿಯಲು ಸಾಧ್ಯವಾಗದೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದೆ ಎಂದು ನಿವಾಸಿಗಳಾದ ವಿನೋದ್, ವಿಜಯ ತಿಳಿಸಿದ್ದಾರೆ.
ಸುಂಟಕೊಪ್ಪ ಅಪ್ಪಾರಂಡ ಬಡಾವಣೆಯ ಬಿ.ಕೆ.ಪ್ರಶಾಂತ್ ಮನೆಯ ಮೇಲೆ ಮನೆಯ ಮಹಡಿಯ ಮೇಲೆ ಅಳವಡಿಸಿದ ಸೀಟಿನ ಮೇಲ್ಛಾವಣಿ ಗಾಳಿಯ ರಭಸಕ್ಕೆ ಸಿಲುಕಿ ಕಬ್ಬಿಣ ಸಮೇತ ಕಿತ್ತು ಬಂದು ಪ್ರಶಾಂತ್ ಅವರ ಮನೆಯ ಮೇಲ್ಚಾವಣಿ ಬಿದ್ದ ಪರಿಣಾಮ ಸಾವಿರಾರು ರೂ. ನಷ್ಟ ಉಂಟಾಗಿದೆ.
ವಿದ್ಯುತ್ ಕಂಬ ಮರಗಲು ಧರೆಗೆ: ಮಳೆ ಹಾಗೂ ಗಾಳಿಯ ಆರ್ಭಟದಿಂದ ಕತ್ತಲ ಕೂಪಕ್ಕೆ ಸುಂಟಿಕೊಪ್ಪದ ತೆರಳಿದ ಹಲವು ಗ್ರಾಮಗಳು. ಕೆಂಚಟ್ಟಿ, ಗುಂಡುಗುಟ್ಟಿ, ಕುಂಬೂರು, ಮತ್ತಿಕಾಡು, ಭೂತನಕಾಡು, ಸೇರಿದಂತೆ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ 40ರಿಂದ 50 ವಿದ್ಯುತ್ ಕಂಬಗಳು ಮಳೆ ಗಾಲಿಗೆ ಮುರಿದು ಬಿದ್ದಿದೆ ಎಂದು ಸೆಸ್ಕ್ ಜೂನಿಯರ್ ಅಭಿಯಂತರ ರಮೇಶ್ ತಿಳಿಸಿದ್ದಾರೆ.







