ಕ್ರಿಕೆಟ್ ಬೆಟ್ಟಿಂಗ್: ನಾಲ್ವರ ಬಂಧನ
ಚಿಕ್ಕಮಗಳೂರು, ಮೇ 2: ಮೂಡಿಗೆರೆ ಪಟ್ಟಣದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಬಾಲಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ್ದಲ್ಲದೇ ಆರೋಪಿಗಳಿಂದ 7,35,740 ರೂ. ಸಹಿತ ಹಲವು ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಬಂಧಿತರನ್ನು ಮೂಡಿಗೆರೆ ಪಟ್ಟಣದ ಎಂಜಿ ರಸ್ತೆಯ ದಲ್ಲಾರಾಮ್(34), ಕುನ್ನಳ್ಳಿ ಗ್ರಾಮದ ಸೀತಾನ್(27), ಬಾಬುಲಾಲ್(30)ಎಂದು ಗುರುತಿಸಲಾಗಿದೆ. ಹಾಗೂ ಮತೋರ್ವ ಆರೋಪಿ ಅಪ್ರಾಪ್ತನ ಹೆಸರನ್ನು ಗೌಪ್ಯವಾಗಿಡಲಾಗಿದೆ ಎನ್ನಲಾಗಿದೆ.
ಮೂಡಿಗೆರೆ ಎಂ.ಜಿ ರಸ್ತೆಯಲ್ಲಿರುವ ಸತೀಶ್ ಪಟೇಲ್ ಮಾಲಕತ್ವದ ರಾಮ್‌ದೇವ್ ಗಾರ್ಮೆಂಟ್ಸ್ ಆ್ಯಂಡ್ ಸ್ಯಾರಿ ಸೆಂಟರ್ ಬಟ್ಟೆ ಅಂಗಡಿಯಲ್ಲಿ 2017 ನೆ ಎಪ್ರಿಲ್ ತಿಂಗಳಲ್ಲಿ ನಡೆಯುತ್ತಿರುವ ಟಿ-20 ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪಿಸ್ಸೈ ರಫೀಕ್ ನೇತೃತ್ವದ ಪೊಲೀಸ್ ತಂಡವು ಸ್ಥಳಕ್ಕೆ ಹೋಗಿ ಅಂಗಡಿ ಮೇಲೆ ದಾಳಿ ನಡೆಸಿತ್ತು. ಈ ಸಮಯದಲ್ಲಿ ಅಂಗಡಿಯಲ್ಲಿ 5ಮಂದಿ ಇದ್ದು, ಅದರಲ್ಲಿ 3 ಜನರು ಓಡಿ ಹೋಗಿದ್ದಾರೆ ಎನ್ನಲಾಗಿದೆ.
ಸ್ಥಳದಲ್ಲಿ ಸೆರೆ ಸಿಕ್ಕ ಇಬ್ಬರನ್ನು ವಿಚಾರಿಸಿದಾಗ ಓರ್ವ ವ್ಯಕ್ತಿಯ ಬಳಿ ರೂ. 40 ಸಾವಿರ ರೂ.ಗಳ ಹಣವಿತ್ತು. ಅದು ಕ್ರಿಕೆಟ್ ಬೆಟ್ಟಿಂಗ್ ಕಟ್ಟಿ ಜೂಜಾಟ ಆಡಲು ಹಣ ತಂದಿರುವುದಾಗಿ ಆತ ಸ್ಥಳದಲ್ಲಿಯೇ ಒಪ್ಪಿಕೊಂಡಿದ್ದ. ಅದನ್ನು ವಶಕ್ಕೆ ಪಡೆದದ ಪೊಲೀಸರ ತಂಡವು ಬಿಲ್ಡಿಂಗ್‌ನ ಮೇಲ್ಭಾಗದಲ್ಲಿ ಬೆಟ್ಟಿಂಗ್‌ನಲ್ಲಿ ನಿರತವಾಗಿದ್ದ ಇಬ್ಬರನ್ನು ವಶಕ್ಕೆ ಪಡೆದು ಮೊಬೈಲ್‌ನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಗಳು ತಾವು ಕ್ರಿಕೆಟ್ ಪಂದ್ಯಾಟದಲ್ಲಿ ತಂಡಗಳ ಸೋಲು ಗೆಲುವಿನ ಮೇಲೆ ಹಣವನ್ನು ಪಣವನ್ನಾಗಿ ಕಟ್ಟಿ ಜೂಜಾಟವನ್ನು ಮೊಬೈಲ್ ಮೂಲಕ ಆಡುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಜೂಜಾಟಕ್ಕೆ ಬಳಸಿಕೊಂಡಿದ್ದ 7,35,740 ರೂ. ನಗದು, 3 ಮೊಬೈಲ್, ಪಂದ್ಯಾಟವನ್ನು ವೀಕ್ಷಣೆ ಮಾಡುತ್ತಿದ್ದ ಒಂದು ಟಿ.ವಿ, ಡಿವಿಆರ್, ರಿಮೋಟ್‌ಗಳು ಹಾಗೂ ನಾಲ್ಕು ಬ್ಯಾಂಕ್ ಪಾಸ್ ಬುಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಮೇಲೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.







