ತನ್ವೀರ್ ಸೇಠ್ ಲಂಚ ಆರೋಪ ಪರಿಶೀಲನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಮೇ 2: ಗ್ರಂಥಾಲಯ ಮೇಲ್ವಿಚಾರಕರ ಬಳಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಲಂಚ ಪಡೆದಿದ್ದಾರೆ ಎನ್ನುವ ಆರೋಪದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ಕಿದ್ವಾಯಿ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಂಥಾಲಯ ಮೇಲ್ವಿಚಾರಕರ ವೇತನ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಸಚಿವರ ವಿರುದ್ಧ ಕೇಳಿ ಬಂದಿರುವ ಆರೋಪ ನಿಜವೋ, ಸುಳ್ಳೋ ಎನ್ನುವುದನ್ನು ಪರಿಶೀಲಿಸಲಾಗುವುದು. ಅದಕ್ಕೂ ಮುನ್ನ ಆರೋಪವನ್ನು ಸತ್ಯ ಎಂದು ನಂಬಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಳೆದ ಹಲವಾರು ದಿನಗಳಿಂದ ಖಾಲಿ ಇದ್ದ ವಿಧಾನ ಪರಿಷತ್ ಮೂರು ಸ್ಥಾನಗಳ ನೇಮಕ ಸಂಬಂಧ ರಾಜ್ಯಪಾಲರಿಗೆ ಶಿಫಾರಸು ಕಳುಹಿಸಲಾಗಿದೆ. ರಾಜ್ಯಪಾಲರು ಅಂಕಿತ ಹಾಕಿದ ಮೇಲೆಯೇ ಗೊತ್ತಾಗಲಿದೆ. ಈಗಲೇ ಏನು ಹೇಳಲಾಗುವುದಿಲ್ಲ. ಮುಖ್ಯಮಂತ್ರಿಗಳ ಕಚೇರಿಯಿಂದಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಮೈತ್ರಿಯ ಮಾತುಕತೆ ನಡೆಯುತ್ತಿದೆ ಎನ್ನುವ ಆರೋಪ ನಿರಾಧಾರ. ಆರೋಪ ಮಾಡುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿಯವರೇ ಈ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಹೇಳಿದರು. ಎಐಸಿಸಿ ಮಹಾಧಿವೇಶನ ಬೆಂಗಳೂರಿನಲ್ಲಿ ನಡೆಯುತ್ತದೆ ಎಂಬ ಸುದ್ದಿ ನಿರಾಧಾರ. ಈ ಬಗ್ಗೆ ಪಕ್ಷದ ವರಿಷ್ಟರಿಂದ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಟಷ್ಟಪಡಿಸಿದರು.







