ರಾಜಕೀಯ ನಾಯಕತ್ವದಿಂದ ಸಾಮರಸ್ಯ ಸಂಬಂಧಗಳಿಗೆ ಚ್ಯುತಿ: ನಿಡುಮಾಮಿಡಿ ಸ್ವಾಮೀಜಿ
‘ಸಹೋದರತಾ ಅಭಿಯಾನ’ಕ್ಕೆ ಚಾಲನೆ

ಬೆಂಗಳೂರು, ಮೇ 2: ಸಾಮರಸ್ಯ ಜೀವನ ಸಾಗಿಸುವ ಸಮುದಾಯಗಳ ಸಂಬಂಧಗಳಿಗೆ ರಾಜಕೀಯ ನಾಯಕತ್ವ ಚ್ಯುತಿ ತರುತ್ತಿದೆ ಎಂದು ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.
ಮಂಗಳವಾರ ನಗರದ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸಹೋದರತಾ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲ ಧರ್ಮಗಳು ಸಾಮರಸ್ಯ ಮತ್ತು ಸ್ನೇಹವನ್ನು ಬಯಸುತ್ತವೆ. ಎಲ್ಲ ಧರ್ಮಗಳ ಸಾಧು-ಸಂತರು ಕೂಡಿಬಾಳುವ ಸಂಸ್ಕೃತಿಯನ್ನೇ ಪ್ರತಿಪಾದಿಸುತ್ತಾರೆ. ಆದರೆ ರಾಜಕೀಯ ನಾಯಕತ್ವ ಕೂಡಿಬಾಳುವುದನ್ನು ವಿರೋಧಿಸುತ್ತದೆ. ರಾಜಕೀಯ ನಾಯಕತ್ವ ಜನರ ನಡುವಿನ ಸಂಬಂಧಗಳನ್ನು ನಾಶ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತ ಹಿಂದೂ ಧರ್ಮದಿಂದ ಮಾತ್ರ ರೂಪುಗೊಂಡಿದ್ದಲ್ಲ. ದೇಶದ ಮೂಲನಿವಾಸಿಗಳು ಯಾರೆಂದು ನಿಖರವಾಗಿ ಹೇಳಲು ಯಾವುದೇ ಸ್ಪಷ್ಟ ಆಧಾರವಿಲ್ಲ. ಆದರೆ ಇದೊಂದು ಸರ್ವಧರ್ಮಗಳ ಚೌಕಟ್ಟು. ಭಿನ್ನ ಸಂಸ್ಕೃತಿಗಳ, ಸಮುದಾಯ ಮತ್ತು ಭಾಷೆಗಳ ಕೂಟ ಎಂದು ಹೇಳಿದರು.
ನಗರದ ಸಿಎಸ್‌ಐ ಚರ್ಚ್‌ನ ಪಾದ್ರಿ ಮನೋಹರ್ ಚಂದ್ರ ಪ್ರಸಾದ್ ಮಾತನಾಡಿ, ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಗಳಿಂದ ದೇಶದಲ್ಲಿನ ವೈವಿಧ್ಯತೆಗೆ ಧಕ್ಕೆಯಾಗುತ್ತಿದೆ. ಒಂದು ಸಮುದಾಯದ ಮೇಲೆ ಮತ್ತೊಂದು ಸಮುದಾಯವನ್ನು ಎತ್ತಿಕಟ್ಟುವ ಕುತಂತ್ರ, ಷಡ್ಯಂತ್ರಗಳು ನಡೆಯುತ್ತಿವೆ ಎಂದು ದೂರಿದರು.
ಎಸ್‌ಐಒ ರಾಜ್ಯ ಕಾರ್ಯದರ್ಶಿ ಅಝರುದ್ದಿನ್ ಪಿಲಕೊಡಾನ್ ಮಾತನಾಡಿ, ಹಲವು ಧರ್ಮಗಳು ಒಂದು ಭಾರತ ಎಂಬ ಘೋಷ ವಾಕ್ಯದಡಿ ಒಂದು ವರ್ಷಗಳ ಸಹೋದರತಾ ಅಭಿಯಾನವನ್ನು ನಡೆಸಲಾಗುವುದು. ಪ್ರಮುಖವಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಕಾಲೇಜು ಆವರಣಗಳಲ್ಲಿ ಅಭಿಯಾನ ನಡೆಯಲಿದೆ. ಅಭಿಯಾನದಡಿ ವಿವಿಧ ಚರ್ಚಾ ಸ್ಪರ್ಧೆಗಳು, ಚಿತ್ರಕಲೆ ಸ್ಪರ್ಧೆ, ವಿಚಾರಗೋಷ್ಠಿ, ಸಂವಾದಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಭಿಯಾನದ ಲಾಂಛನವನ್ನು ಲೋಕಾರ್ಪಣೆ ಮಾಡಲಾಯಿತು. ನಗರದ ಜಾಮಿಯಾ ಮಸೀದಿಯ ವೌಲಾನ ಮಕ್ಸೂದ್ ಇಮ್ರಾನ್ ರಶಾದಿ, ಶ್ರೀಗುರು ಸಿಂಗ್ ಸಭಾದ ಅಧ್ಯಕ್ಷ ಎಸ್.ಪರಾಬ್ ಜೊತ್ ಸಿಂಗ್ ಬಾಲಿ, ದಲಿತ ದಮನಿತರ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಭಾಸ್ಕರ್ ಪ್ರಸಾದ್ ಸೇರಿದಂತೆ ಇತರರು ಇದ್ದರು







