ಕಾರ್ಯದರ್ಶಿ ಕಚೇರಿಗೂ ಇ-ಆಡಳಿತ ವ್ಯವಸ್ಥೆ ಜಾರಿ: ಸಚಿವೆ ಉಮಾಶ್ರೀ

ಬೆಂಗಳೂರು, ಮೇ 2: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರ ಕಚೇರಿ ಮಾದರಿಯಲ್ಲೇ ಇಲಾಖೆಯ ಕಾರ್ಯದರ್ಶಿ ಕಚೇರಿಯನ್ನು ಸಂಪೂರ್ಣವಾಗಿ ಇ- ಆಡಳಿತ ವ್ಯವಸ್ಥೆಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಇ-ಆಡಳಿತ ವ್ಯವಸ್ಥೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಇ-ಆಡಳಿತ ವ್ಯವಸ್ಥೆ ಜಾರಿಯಿಂದ ಜನ ಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಡಿಜಿಟಲೀಕರಣ: ಇತಿಹಾಸಕಾರರು, ಸಂಶೋಧಕರು, ಆಡಳಿತಾಗರರು ಹಾಗೂ ಸಾರ್ವಜನಿಕರು ಸೇರಿದಂತೆ ನಾಡಿನ ಇತಿಹಾಸ, ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳನ್ನು ಅಧ್ಯಯನ ಮಾಡಲು ಅನುಕೂಲ ಆಗುವಂತೆ ಪತ್ರಾಗಾರ ಇಲಾಖೆಯು ಡಿಜಿಟಲೀಕರಣ ಕೈಗೊಂಡಿದೆ ಎಂದರು.
ಮೊದಲ ಹಂತದಲ್ಲಿ 60 ಲಕ್ಷ ಪುಟಗಳ ಐತಿಹಾಸಿಕ ಮೌಲ್ಯಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, 5 ಲಕ್ಷ ಪುಟಗಳ ದಾಖಲೆಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದು, ಇದು ದೇಶದಲ್ಲೇ ಪ್ರಪ್ರಥಮ ಎಂದು ಉಮಾಶ್ರೀ ಇದೇ ವೇಳೆ ಶ್ಲಾಘಿಸಿದರು.
1834-1950ರ ವರೆಗೆ ಮೈಸೂರು ಕಮಿಷನರ್‌ಗಳ ಕಾಲದ ಆಡಳಿತ ದಾಖಲೆಗಳು 60 ಸಾವಿರ ಪುಟಗಳ ಹಳೆಯ ಕನ್ನಡ, ಮರಾಠಿ ದಾಖಲೆಗಳನ್ನು ಸಂಗ್ರಹಿಸಿ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ ದಾಖಲೆಗಳನ್ನು ಡಿಜಿಟಲೀಕರಣ ಕಾರ್ಯವನ್ನು ಪತ್ರಾಗಾರ ಇಲಾಖೆ ಕೈಗೆತ್ತಿಕೊಂಡಿದೆ.
ಕಲ್ಬುರ್ಗಿಯಲ್ಲಿ ವಿಭಾಗೀಯ ಪತ್ರಾಗಾರ ಕಚೇರಿಯನ್ನು ಆರಂಭಿಸಲಾಗಿದ್ದು, ಆ ಭಾಗದ ದಾಖಲೆಗಳನ್ನು ಪಡೆದು ಹೊಸದಿಲ್ಲಿ, ಪುಣೆ, ಹೈದರಾಬಾದ್, ಮದ್ರಾಸ್, ಗೋವಾ, ಔರಂಗಾಬಾದ್ ರಾಜ್ಯಗಳ ಪತ್ರಾಗಾರ ಇಲಾಖೆಗಳೊಂದಿಗೆ ಈಗಾಗಲೇ ಪತ್ರ ವ್ಯವಹಾರವನ್ನು ಪತ್ರಾಗಾರ ಇಲಾಖೆ ನಡೆಸಿದ್ದು, ಇದು ಇತಿಹಾಸಕಾರರು, ಸಂಶೋಧಕರಿಗೆ ಅಧ್ಯಯನ ನಡೆಸಲು ಮೂಲ ದಾಖಲೆಗಳು ಇನ್ನು ಮುಂದೆ ಸಿಗಲಿವೆ ಎಂದರು
ಹಿರಿಯ ಸಾಹಿತಿ ಹಾಗೂ ನಿವೃತ್ತ ನ್ಯಾ.ಕೋ.ಚನ್ನಬಸಪ್ಪ ಮಾತನಾಡಿ, ನನ್ನ ಬಳಿ ಇರುವ 3 ಸಾವಿರಕ್ಕೂ ಹೆಚ್ಚು ಮಹತ್ವದ ದಾಖಲೆಗಳನ್ನು ಏನು ಮಾಡಬೇಕೆನ್ನುವ ಗೊಂದಲದಲ್ಲಿರುವಾಗಲೇ ಪತ್ರಾಗಾರ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಇವೆಲ್ಲವನ್ನೂ ಡಿಜಿಟಲೀಕರಣಗೊಳಿಸಿ ಕಾಪಾಡಲು ಸಾಧ್ಯ ಎನ್ನುವ ಉತ್ತರ ನನಗೆ ಸಮಾಧಾನ ತಂದಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇಣು ಶಿಕ್ಷೆಗೆ ಒಳಗಾದ ಆರೋಪಿಗಳಿಗೆ ನೀಡಿದ ತೀರ್ಪಿನ ಪ್ರತಿಯೂ ನನ್ನ ಬಳಿ ಇದ್ದು, ಅದೆಲ್ಲವನ್ನು ಪತ್ರಾಗಾರ ಇಲಾಖೆಗೆ ನೀಡಿದ್ದೇನೆ. ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದ ಐತಿಹಾಸಿಕ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ಬರಹಗಳು ನನ್ನಲ್ಲಿದ್ದು, ಎಲ್ಲವನ್ನು ಪತ್ರಾಗಾರ ಇಲಾಖೆಗೆ ನೀಡಿದ್ದು, ಅವುಗಳನ್ನು ಸಂರಕ್ಷಿಸಲು ಸೂಚಿಸಿದ್ದೇನೆ ಎಂದರು.
ಪತ್ರಾಗಾರ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ್, ಸರಕಾರದ ಕಾರ್ಯದರ್ಶಿ ಚಕ್ರವರ್ತಿ ಮೋಹನ್, ಎನ್‌ಐಸಿ ಹಿರಿಯ ತಾಂತ್ರಿಕ ನಿರ್ದೇಶಕ ಲಕ್ಷ್ಮೀಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
‘ಅದ್ಭುತ ಸಾಧನೆಗೆ ವಿಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವನ ಸಂದೇಶ ಸಾರುವ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕು. ಆಡಳಿತದಲ್ಲಿ ಪಾರದರ್ಶಕತೆ ತರುವ ಮೂಲಕ ಸುಧಾರಣೆಗೆ ಇ-ಆಡಳಿತ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು’
-ಕೋ.ಚನ್ನಬಸಪ್ಪ, ನಿವೃತ್ತ ನ್ಯಾಯಮೂರ್ತಿ







