ಪೈಲಟ್ ಲೈಸನ್ಸ್ ಪಡೆಯಲಿದ್ದಾಳೆ ಗುಜರಾತ್ ನ ಬಸ್ ಕಂಡಕ್ಟರ್ ನ ಪುತ್ರಿ

ಸೂರತ್, ಮೇ 3: ಬಸ್ ಕಂಡಕ್ಟರ್ ಒಬ್ಬರ 19 ವರ್ಷದ ಪುತ್ರಿ ಕಮರ್ಷಿಯಲ್ ಪೈಲಟ್ ಲೈಸನ್ಸ್ ಪಡೆಯುವತ್ತ ದೃಢ ಹೆಜ್ಜೆಗಳನ್ನಿಡುತ್ತಿದ್ದಾಳೆ. ಜಹಾಂಗೀರಪುರದ ಗಣಪತ್ ಪಟೇಲ್ ಎಂಬವರ ಪುತ್ರಿ ಐಶ್ವರ್ಯ ಪಟೇಲ್ ಈಗಾಗಲೇ ಸಿಪಿಎಲ್‌ನಲ್ಲಿ ತನ್ನ 200 ಗಂಟೆಗಳ ಹಾರಾಟ ತರಬೇತಿಯ ಭಾಗವಾಗಿ 185 ಗಂಟೆಗಳ ಹಾರಾಟ ಪೂರ್ತಿಗೊಳಿಸಿದ್ದಾಳೆ ಹಾಗೂ ಏರ್ ಲೈನ್ ಟ್ರಾನ್ಸ್‌ಪೋರ್ಟೇಶನ್ ಪೈಲಟ್ ಲೈಸನ್ಸನ್ನು ತನ್ನ 21ನೇ ವರ್ಷದಲ್ಲಿ ಪಡೆಯಲಿದ್ದಾಳೆ.
ಇಲ್ಲಿನ ಸಂಸ್ಕಾರ ಭಾರತಿ ಶಾಲೆಯಲ್ಲಿ ತನ್ನ 12ನೇ ತರಗತಿಯನ್ನು ವಿಜ್ಞಾನ ವಿಭಾಗದಲ್ಲಿ ಶೇ.70 ಅಂಕಗಳೊಂದಿಗೆ ಪೂರೈಸಿದ ಐಶ್ವರ್ಯ, ಪೈಲಟ್ ಆಗಬೇಕೆಂಬ ಮಹದಾಸೆಯನ್ನು ಹೊತ್ತುಕೊಂಡಿದ್ದಳು. ಆದರೆ ಆಕೆಯ ಬಡ ಕುಟುಂಬ ಆಕೆಯ ಈ ಆಸೆಯನ್ನು ನೆರವೇರಿಸುವ ಸ್ಥಿತಿಯಲ್ಲಿರಲಿಲ್ಲ. ವಿಮಾನ ಹಾರಾಟ ತರಬೇತಿ ಪಡೆಯಲು ಬೇಕಿದ್ದ ರೂ.25 ಲಕ್ಷ ಹೊಂದಿಸುವುದು ಗುಜರಾತ್ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಕಂಡಕ್ಟರ್ ಆಗಿರುವ ಗಣಪತ್ ಪಟೇಲ್ ಅವರಿಗೆ ಅಸಾಧ್ಯದ ಮಾತಾಗಿತ್ತು.
‘‘ನನ್ನ ಕನಸನ್ನು ಸಾಕಾರಗೊಳಿಸಲು ಯತ್ನಿಸಲು ತಂದೆ ಉತ್ತೇಜಿಸುತ್ತಿದ್ದರು. ನಾವು ಜಿಲ್ಲಾ ನಿಯಮಕ್ ಕಚೇರಿಗೆ ಭೇಟಿ ನೀಡಿದೆವು ಹಾಗೂ ರಾಜ್ಯ ಸರಕಾರ ನನಗೆ ರೂ.25 ಲಕ್ಷ ಸಾಲ ಶೇ.4 ಬಡ್ಡಿದರಕ್ಕೆ ಒದಗಿಸಿತು’’ ಎಂದು ಹೇಳುತ್ತಾಳೆ ಐಶ್ವರ್ಯ. ಮಹಾರಾಷ್ಟ್ರದ ಶಿರ್ಪುರ್ ನಗರದಲ್ಲಿ 185 ಗಂಟೆಗಳ ಹಾರಾಟ ತರಬೇತಿ ಪೂರ್ತಿಗೊಳಿಸಿದ ಈಕೆ ಉಳಿದ 15 ಗಂಟೆಗಳ ಹಾರಾಟ ತರಬೇತಿಯನ್ನು ಹೈದರಾಬಾದ್ ನಗರದಲ್ಲಿ ಪೂರೈಸಲಿದ್ದಾಳೆ.
‘‘ಎಲ್ಲಿಯೂ ಎಡವಲು ನಾನು ಸಿದ್ಧಳಿಲ್ಲ. ಎಲ್ಲಾ ಪರೀಕ್ಷೆಗಳಲ್ಲೂ ಪ್ರಥಮ ಹಂತದಲ್ಲಿಯೇ ತೇರ್ಗಡೆಯಾಗಿದ್ದೇನೆ’’ ಎನ್ನುತ್ತಾಳೆ ಐಶ್ವರ್ಯ. ಮುಂದೊಂದು ದಿನ ವಾಣಿಜ್ಯ ವಿಮಾನದ ಕಮಾಂಡರ್ ಆಗುವ ಕನಸನ್ನು ಈಕೆ ಕಾಣುತ್ತಿದ್ದಾಳೆ.