ರಾಜಕೀಯ ಪ್ರೇಮಕಥೆ :ಎಂಎಲ್‌ಎ ವೆಡ್ಸ್ ಸಬ್ ಕಲೆಕ್ಟರ್...!

ತಿರುವನಂತಪುರ, ಮೇ 3: ಕೇರಳದ ಕಾಂಗ್ರೆಸ್ ಶಾಸಕ ಕೆ.ಎಸ್ .ಶಬರಿನಾಥನ್ ಮತ್ತು ತಿರುವನಂತಪುರದ ಐಎಎಸ್ ಅಧಿಕಾರಿ ಡಾ.ದಿವ್ಯಾ ಎಸ್. ಅಯ್ಯರ್ ಪ್ರೇಮ ಪ್ರಕರಣ ಮದುವೆ ಹಂತಕ್ಕೆ ಮುಟ್ಟಿದ್ದು, ಶೀಘ್ರದಲ್ಲೇ ಇವರು ಸಪ್ತಪದಿ ತುಳಿಯಲಿದ್ದಾರೆ.
ಶಾಸಕ ಶಬರಿನಾಥನ್ ಅವರು ದಿವ್ಯಾ ನಡುವಿನ ಸಂಬಂಧವನ್ನು ಕೊನೆಗೂ ಬಹಿರಂಗಪಡಿಸಿದ್ದಾರೆ. ಶೀಘ್ರದಲ್ಲೇ ಸಬ್ ಕಲೆಕ್ಟರ್ ಡಾ.ದಿವ್ಯಾ ಎಸ್ .ಅಯ್ಯರ್ ಅವರನ್ನು ಮದುವೆಯಾಗಲಿರುವುದಾಗಿ ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.
ಶಾಸಕ ಕೆ.ಎಸ್ .ಶಬರಿನಾಥನ್ ಮತ್ತು ಡಾ.ದಿವ್ಯಾ ಎಸ್ .ಅಯ್ಯರ್ ವಿವಾಹಕ್ಕೆ ಎರಡೂ ಕುಟುಂಬದವರು ಒಪ್ಪಿಗೆ ನೀಡಿದ್ದಾರೆ. ಮುಂದಿನ ತಿಂಗಳು ಇವರ ವಿವಾಹ ನಡೆಯಲಿದೆ.
33ರ ಹರೆಯದ ಶಬರಿನಾಥನ್ ಅವರು ಕೇರಳದ ಮಾಜಿ ಸ್ಪೀಕರ್ ಮತ್ತು ಕಾಂಗ್ರೆಸ್ ನಾಯಕ ದಿವಂತ ಜಿ.ಕಾರ್ತಿಕೇಯನ್ ಅವರ ಪುತ್ರ. ಎಂಬಿಎ ಪದವೀಧರ ಶಬರಿನಾಥನ್ ರಾಜಕೀಯ ಪ್ರವೇಶಿಸುವ ಮೊದಲು ಮುಂಬೈನ ಟಾಟಾ ಗ್ರೂಪ್ ಸಂಸ್ಥೆಯಲ್ಲಿ ಕೆಲವು ವರ್ಷಗಳ ಕಾಲ ಉದ್ಯೋಗದಲ್ಲಿದ್ದರು.
ತಂದೆ ಜಿ.ಕಾರ್ತಿಕೇಯನ್ ನಿಧನರಾದ ಹಿನ್ನೆಲೆಯಲ್ಲಿ 2015ರಲ್ಲಿ ಅರುವಿಕ್ಕರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಶಬರಿನಾಥನ್ ಸ್ಪರ್ಧಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. 2016ರಲ್ಲಿ ಮತ್ತೆ ಚುನಾವಣೆಗೆ ಸ್ಫರ್ಧಿಸಿದ ಶಬರಿನಾಥನ್ ಎರಡನೆ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
32ರ ದಿವ್ಯಾ ಸಿಎಂಸಿ ವೆಲ್ಲೂರ್ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದ ಬಳಿಕ 2013ರಲ್ಲಿ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಅನಂತರ ಕೊಟ್ಟಾಯಂ ಜಿಲ್ಲಾ ಅಸಿಸ್ಟೆಂಟ್ ಕಲೆಕ್ಟರ್ ಆಗಿ ನೇಮಕಗೊಂಡಿದ್ದರು. ಬಳಿಕ ತವರು ಜಿಲ್ಲೆ ತಿರುವನಂತಪುರಕ್ಕೆ ಸಬ್ ಕಲೆಕ್ಟರ್ ಆಗಿ ವರ್ಗಾವಣೆಗೊಂಡರು.
ತಿರುವನಂತಪುರದ ನಿವಾಸಿಯಾಗಿರುವ ಎಂಎಲ್‌ಎ ಶಬರಿನಾಥನ್ ಅವರು ಉಪ ಜಿಲ್ಲಾಧಿಕಾರಿ ದಿವ್ಯಾರನ್ನು ಅದೊಂದು ದಿನ ಕೆಲಸದ ನಿಮಿತ್ತ ಭೇಟಿಯಾದರು. ಬಳಿಕ ಅವರು ಬಹಳ ಆಪ್ತರಾದರು. ಹಾಗೆಯೇ ಮುಂದುವರಿದ ಅವರ ಪ್ರೇಮ ಪ್ರಕರಣ ಮದುವೆ ಹಂತಕ್ಕೆ ಮುಟ್ಟಿದೆ. ಇಬ್ಬರೂ ಮದುವೆಯಾಗುವ ಸಿದ್ದತೆಯಲ್ಲಿದ್ದಾರೆ.
ಹಾಗೇ ನೋಡಿದರೆ ಶಬರಿನಾಥನ್ ತಂದೆ ಕಾರ್ತಿಕೇಯನ್ ಮತ್ತು ತಾಯಿ ಎಂ.ಟ.ಸುಲೇಖಾ ಅವರದ್ದು ಪ್ರೇಮ ವಿವಾಹ. ಕೇರಳ ರಾಕೀಯದಲ್ಲಿ ಸ್ಟಾರ್ ಆಗಿ ಬೆಳೆಯುತ್ತಿದ್ದ ಆ ಹೊತ್ತು ಕಾರ್ತಿಕೇಯನ್ ಕಾಲೇಜು ಪ್ರೋಫೆಸರ್ ಎಂ.ಟಿ.ಸುಲೇಖಾ ಅವರನ್ನು ಪ್ರೀತಿಸಿ ವಿವಾಹವಾಗಲು ಹೊರಟಾಗ ವಿವಾಹಕ್ಕೆ ಹಿರಿಯರಿಂದ ಅಡ್ಡಿ ಎದುರಾಗಿತ್ತು. ಆದರೆ ಕಾರ್ತಿಕೇಯನ್ -ಸುಲೇಖಾ ವಿವಾಹವನ್ನು ಮನೆ ಮಂದಿಗೆ ತಡೆಯಲು ಸಾಧ್ಯವಾಗಿರಲಿಲ್ಲ.
ಕಾರ್ತಿಕೇಯನ್ -ಸುಲೇಖಾ ಅವರ ವಿವಾಹಕ್ಕೆ ಮನೆ ಮಂದಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಪುತ್ರ ಶಬರಿನಾಥನ್ -ಐಎಎಸ್ ಅಧಿಕಾರಿ ಡಾ.ದಿವ್ಯಾ ಎಸ್. ಅಯ್ಯರ್ ವಿವಾಹಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆ. ಅವರು ಜೂನ್ ನಲ್ಲಿ ದಾಂಪತ್ಯ ಬದುಕಿಗೆ ಕಾಲಿರಿಸಲಿದ್ದಾರೆ.