ವಿಶ್ವದ ಅತ್ಯಂತ ತೂಕದ ಮಹಿಳೆಗೆ ಮುಂಬೈ ಆಸ್ಪತ್ರೆಯ ಉಚಿತ ಚಿಕಿತ್ಸೆ: ಕಟು ಸತ್ಯ ಬಹಿರಂಗ ಪಡಿಸಿದ ಶೋಭಾ ಡೇ

ಮುಂಬೈ, ಮೇ 3 : ಖ್ಯಾತ ಲೇಖಕಿ ಹಾಗೂ ಅಂಕಣಗಾರ್ತಿ ಶೋಭಾ ಡೇ ಮುಂಬೈ ಟ್ಯಾಬ್ಲಾಯ್ಡ್ ಒಂದಕ್ಕೆ ಬರೆದಿರುವ ತಮ್ಮ ಅಂಕಣದಲ್ಲಿ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಶ್ವದ ಅತ್ಯಂತ ತೂಕದ ಮಹಿಳೆಯ ಬಗ್ಗೆ ಪ್ರಸ್ತಾಪಿಸಿ ಸಾಕಷ್ಟು ಸುದ್ದಿಯಾಗಿದ್ದಾರೆ.
ಅವರ ಅಂಕಣದಲ್ಲಿ ಹೀಗೆಂದು ಬರೆಯಲಾಗಿದೆ. ‘‘ಇಮಾನ್ ಗೆ ಉಚಿತ ಚಿಕಿತ್ಸೆ ನೀಡುವ ನಿರ್ಧಾರ ಕೈಗೊಂಡಂದಿನಿಂದ ಆಕೆಯ ಅಪಾಯಕಾರಿ, ಸವಾಲುಭರಿತ ಈಜಿಪ್ಟ್ ನಿಂದ ಭಾರತದತ್ತದ ಪಯಣದ ಒಂದೇ ಒಂದು ಅಂಶವನ್ನು ಬಿಟ್ಟು ಬಿಡದೆ ಪ್ರಚಾರ ಮಾಡಲಾಗಿದೆ. ಆಕೆಗೆ ಉಚಿತ ಚಿಕಿತ್ಸೆಯ ಆಫರ್ ಅನ್ನು ಸೈಫೀ ತಂಡದ ಪರವಾಗಿ ವೈಯಕ್ತಿಕವಾಗಿ ಮಾಡಿದವರು ಡಾ.ಮುಝಫ್ಫಲ್ ಲಕ್ಡವಾಲ ಎಂಬ ಒಬ್ಬ ಮಾಧ್ಯಮ ಪ್ರಿಯ, ಫೋಟೋಜೆನಿಕ್ ಬೆರಿಯಾಟ್ರಿಕ್ ಸರ್ಜನ್. ಆಸ್ಪತ್ರೆ ಆಕೆಯ ಚಿಕಿತ್ಸೆಗೆ ಇಲ್ಲಿಯ ತನಕ ರೂ.2 ಕೋಟಿಗೂ ಹೆಚ್ಚು ಹಣ ವ್ಯಯಿಸಿದೆ ನಿಜ. ಆದರೆ ಅದರಿಂದ ಕೋಟಿಗಟ್ಟಲೆ ಮೌಲ್ಯದ ಅಂತಾರಾಷ್ಟ್ರೀಯ ಮಟ್ಟದ ಪ್ರಚಾರವನ್ನು ಆಸ್ಪತ್ರೆ ಹಾಗೂ ಡಾ.ಲಕ್ಡವಾಲ ಪಡೆದಿದ್ದಾರೆ.’’
ಆದರೆ ಶೋಭಾರ ಈ ಬರಹ ಡಾ ಮುಫ್ಫಝಲ್ ಲಕ್ಡವಾಲಾಗೆ ಹಿಡಿಸಿಲ್ಲ. ಅವರು ಈ ಬಗ್ಗೆ ಟ್ವೀಟ್ ಒಂದನ್ನು ಮಾಡಿ ‘ಓಹ್, ಇಮಾನ್ ಳನ್ನು ಉಳಿಸಲು ನಾನು ವೈದ್ಯರ ಒಂದು ತಂಡವನ್ನು ಆಯ್ದುಕೊಂಡಾಗ ಅವರು ಇಷ್ಟೊಂದು ಪರಿಣತರು ಎಂದು ನನಗೆ ತಿಳಿದೇ ಇರಲಿಲ್ಲ’’ ಎಂದು ಬಿಟ್ಟರು.
ಇಮಾನ್ ಸೈಫೀ ಆಸ್ಪತ್ರೆಯಲ್ಲಿ ಮೊದಮೊದಲು ಚಿಕಿತ್ಸೆ ಪಡೆದು, ಶಸ್ತ್ರಕ್ರಿಯೆಯನ್ನೂ ಆಕೆಯ ಮೇಲೆ ನಡೆಸಲಾಗಿ ಆಕೆ ಬಹಳಷ್ಟು ತೂಕ ಕಳೆದುಕೊಂಡಿದ್ದಾಳೆಂದು ವೈದ್ಯರು ಹೇಳಿಕೊಂಡಾಗ ಎಲ್ಲರಿಗೂ ಸಂತಸವಾಗಿದ್ದರೂ ಇದಕ್ಕೆಲ್ಲಾ ತಣ್ಣೀರೆರಚುವಂತೆ ಇಮಾನ್ ಸಹೋದರಿ, 'ಆಸ್ಪತ್ರೆ ಹೇಳುತ್ತಿರುವುದೆಲ್ಲಾ ಸುಳ್ಳು ತಾನು ಅವರನ್ನು ನಂಬುವುದಿಲ್ಲ' ಎಂದು ಬಿಟ್ಟಳಲ್ಲದೆ ಇಮಾನ್ ಳನ್ನು ಬೇರೆ ಆಸ್ಪತ್ರೆಗೆ ಸಾಗಿಸುವ ಯೋಚನೆಯ ಬಗ್ಗೆಯೂ ಹೇಳಿದ್ದಳು. ಸದ್ಯದಲ್ಲಿಯೇ ಅಬು ಧಾಬಿಯ ವಿಇಎಸ್ ಹೆಲ್ ಕೇರ್ ಆಸ್ಪತ್ರೆಗೆ ಇಮಾನ್ ಪಯಣಿಸಲಿದ್ದಾಳೆಂದು ತಿಳಿದು ಬಂದಿದೆ.
ಅಂದ ಹಾಗೆ ಈ ವರ್ಷದ ಫೆಬ್ರವರಿಯಲ್ಲಿ ಧಡೂತಿ ದೇಹದ ಪೊಲೀಸ್ ಪೇದೆಯೊಬ್ಬರ ಫೋಟೋವನ್ನು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ್ದ ಶೋಭಾ ‘‘ಹೆವಿ ಪೊಲೀಸ್ ಬಂದೋಬಸ್ತ್ ಇನ್ ಮುಂಬೈ ಟುಡೆೆ’’ ಎಂದು ಬರೆದಿದ್ದರು.
ಆದರೆ ವಾಸ್ತವವಾಗಿ ಈ ಪೊಲೀಸ್ ಸಿಬ್ಬಂದಿ ದೌಲತ್ ರಾಂ ಜೊಗಾವತ್ ಮಧ್ಯ ಪ್ರದೇಶದವರಾಗಿದ್ದು, ಇನ್ಸುಲಿನ್ ಅಸಮತೋಲನದಿಂದ 180 ಕೆ.ಜಿ. ತೂಗುತ್ತಿದ್ದರು. ಇವರಿಗೆ ಕೂಡ ಡಾ.ಲಕ್ಡವಾಲ ಅವರೇ ಚಿಕಿತ್ಸೆ ನೀಡಿದ್ದು ಈಗ ಮತ್ತೆ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.







