ಉತ್ತರ ಪ್ರದೇಶ: ಆದಿತ್ಯನಾಥ್ ರ ಹಿಂದೂ ಯುವವಾಹಿನಿಯಿಂದ ವ್ಯಕ್ತಿಯ ಬರ್ಬರ ಕೊಲೆ

ಬುಲಂದ್‌ಶಹರ,ಮೇ 3: ಹತ್ತು ಜನರ ಗುಂಪೊಂದು 45ರ ಹರೆಯದ ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ಘಟನೆ ಮಂಗಳವಾರ ಇಲ್ಲಿ ಸಂಭವಿಸಿದೆ. ಹತ ಗುಲಾಂ ಮುಹಮ್ಮದ್‌ರ ಸಂಬಂಧಿಯೋರ್ವ ಕೆಲವು ದಿನಗಳ ಹಿಂದೆ ಭಿನ್ನಕೋಮಿಗೆ ಸೇರಿದ ಯುವತಿಯೊಂದಿಗೆ ಪರಾರಿಯಾಗಿದ್ದು, ಈ ದ್ವೇಷ ಕೊಲೆಗೆ ಕಾರಣವೆನ್ನಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು ಕೆಲವು ವರ್ಷಗಳ ಹಿಂದೆ ಸ್ಥಾಪಿಸಿದ್ದ ಬಲಪಂಥೀಯ ಸಂಘಟನೆ ಹಿಂದು ಯುವವಾಹಿನಿ ಈ ಕೃತ್ಯವನ್ನು ನಡೆಸಿದೆ ಎಂದು ಮೃತರ ಕುಟುಂಬವು ಆರೋಪಿಸಿದೆ.
ಪೊಲೀಸರು ದಾಖಲು ಮಾಡಿಕೊಂಡಿರುವ ಎಫ್‌ಐಆರ್‌ನಲ್ಲಿ ಹಿಂದು ಯುವವಾಹಿನಿಗೆ ಸೇರಿದ ಆರು ಅಪರಿಚಿತ ಶಂಕಿತ ವ್ಯಕ್ತಿಗಳನ್ನು ಆರೋಪಿಗಳೆಂದು ಉಲ್ಲೇಖಿಲಾಗಿದೆ.
ಗುಂಪಿನ ಗುರಿಯಾಗಿದ್ದ 19ರ ಹರೆಯದ ಯುವಕ ಕೆಲವು ದಿನಗಳ ಹಿಂದೆ ನೆರೆಯ ಗ್ರಾಮದ 18ರ ಹರೆಯದ ಯುವತಿಯೊಂದಿಗೆ ಪರಾರಿಯಾಗಿದ್ದು, ಆಕೆಯ ಕುಟುಂಬ ದವರು ಅಪಹರಣ ಪ್ರಕರಣವನ್ನು ದಾಖಲಿಸಿದ್ದರು. ಗುಲಾಂ ಮುಹಮ್ಮದ್ ಈ ಯುವಕನ ದೂರದ ಸಂಬಂಧಿಯಾಗಿದ್ದರು.
ತಮ್ಮ ದೂರಿನ ಕುರಿತು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಯುವತಿಯ ಮನೆಯವರು ದೂರಿಕೊಂಡ ಬಳಿಕ ಆರೋಪಿಗಳ ಗುಂಪು ಮಂಗಳವಾರ ಬೆಳಿಗ್ಗೆ ಗುಲಾಂ ಮುಹಮ್ಮದ್‌ರ ಮನೆಗೆ ಬಂದಿತ್ತು. ಈ ವೇಳೆ ತನ್ನ ಮಾವಿನ ತೋಟದಲಿದ್ದ ಅವರನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದ ಗುಂಪು ಥಳಿಸಿ ಕೊಂದು ಹಾಕಿದೆ.
ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲಿಸರು ಬಂಧಿಸಿದ್ದು, ದೂರಿನಲ್ಲಿ ಯುವವಾಹಿನಿ ಕಾರ್ಯಕರ್ತರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಸದ್ಯ ಅದನ್ನು ಖಚಿತ ಪಡಿಸಿಕೊಳ್ಳುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮುನಿರಾಜ್ ಸುದ್ದಿಸಂಸ್ಥೆಗೆ ತಿಳಿಸಿದರು.
ಗುಲಾಂ ಮುಹಮ್ಮದ್ ಹತ್ಯೆಯಲ್ಲಿ ಯಾವುದೇ ಸಂಘಟನೆಯ ಪಾತ್ರವಿರುವುದು ಕಂಡುಬಂದರೆ ನಾವು ಸರಕಾರಕ್ಕೆ ಮಾಹಿತಿ ನೀಡುತ್ತೇವೆ. ಕಾನೂನು ಸಲಹೆ ಪಡೆದುಕೊಂಡು ಮುಂದಿನ ಕ್ರಮವನ್ನು ಕೈಗೊಳ್ಳುತ್ತೇವೆ ಎಂದ ಅವರು, ಹಿಂದು ಯುವವಾಹಿನಿ ಈ ಕೊಲೆಯಲ್ಲಿ ಭಾಗಿಯಾಗಿದೆ ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರ ಲಭಿಸಿಲ್ಲ ಎಂದರು.