ಕರ್ನಾಟಕ ರೆಸ್ಟೋರೆಂಟ್ ಮಾಲಕರ ಸಂಘದಿಂದ ಶ್ಲಾಘನೀಯ ನಿರ್ಧಾರ ಯಾವುದೇ ಹೋಟೆಲ್‌ನಲ್ಲಿ ಉಚಿತವಾಗಿ ಶೌಚಾಲಯ ಬಳಸಿ...!

ಬೆಂಗಳೂರು,ಮೇ 3: ಎಲ್ಲಿಗೋ ಹೋಗುತ್ತಿದ್ದೀರಿ....ತುರ್ತಾಗಿ ಮೂತ್ರ ವಿಸರ್ಜನೆ ಮಾಡಲೇಬೇಕಾದ ಒತ್ತಡಕ್ಕೆ ಸಿಲುಕಿದ್ದರೆ ಅದಕ್ಕಾಗಿ ಸಮೀಪದ ಹೋಟೆಲ್‌ಗೆ ಹೋಗಿ ಅಲ್ಲಿಯ ಶೌಚಾಲಯವನ್ನು ಬಳಸಿ ಒತ್ತಡದಿಂದ ಪಾರಾಗಬಹುದು. ಆದರೆ ಇದಕ್ಕಾಗಿ ಹೋಟೆಲ್‌ನಲ್ಲಿ ತಂಪು ಪಾನೀಯವೋ ಅಥವಾ ಚಹಾವನ್ನೋ ಕುಡಿಯುವುದು ಅನಿವಾರ್ಯವಾಗಿರುತ್ತದೆ. ಆದರೆ ಇನ್ನು ಮುಂದೆ ಮೂತ್ರ ವಿಸರ್ಜನೆ ಮಾಡಲೆಂದೇ ಹೋಟೆಲ್‌ನಲ್ಲಿ ಏನನ್ನಾದರೂ ಖರೀದಿಸುವ ಅನಿವಾರ್ಯತೆಯಿಲ್ಲ.
ರಾಜ್ಯದಲ್ಲಿಯ ರೆಸ್ಟೋರೆಂಟ್‌ಗಳ ಶೌಚಾಲಯಗಳನ್ನು ಉಚಿತವಾಗಿ ಬಳಸಲು ಸಾರ್ವಜನಿಕರಿಗೆ ಅವಕಾಶ ನೀಡಲು ಕರ್ನಾಟಕ ರೆಸ್ಟೋರೆಂಟ್ ಮಾಲಕರ ಸಂಘವು ಸ್ವಯಂಪ್ರೇರಣೆಯಿಂದ ನಿರ್ಧರಿಸಿದೆ.
ಹೆಚ್ಚಿನ ಸಂದರ್ಭಗಳಲ್ಲಿ ಸಾರ್ವಜನಿಕ ಶೌಚಾಲಯಗಳಿರುವುದಿಲ್ಲ ಮತ್ತು ಹತ್ತಿರದ ಹೋಟೆಲ್‌ಗಳಲ್ಲಿರುವ ಶೌಚಾಲಯಗಳೇ ಜನರಿಗೆ ಏಕೈಕ ಆಸರೆಯಾಗಿರುತ್ತವೆ. ಕೇವಲ ಹೋಟೆಲ್‌ಗಳು ಮಾತ್ರವಲ್ಲ, ಬಾರ್‌ಗಳು ಮತ್ತು ಪಬ್‌ಗಳಲ್ಲಿಯೂ ಈ ಉಚಿತ ಸೌಲಭ್ಯ ಜನರಿಗೆ ಬುಧವಾರದಿಂದಲೇ ಲಭ್ಯವಿದೆ ಎಂದು ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.
ತಮ್ಮಲ್ಲಿಯ ಶೌಚಾಲಯಗಳನ್ನು ಉಪಯೋಗಿಸಲು ಮಹಿಳೆಯರು ಮತ್ತು ಮಕ್ಕಳಿಗೆ ಅವಕಾಶ ನೀಡಲು ದಕ್ಷಿಣ ದಿಲ್ಲಿಯ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಎರಡು ದಿನಗಳ ಹಿಂದೆ ನಿರ್ಧರಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
ಸಂಘವು ಈ ನಿರ್ಧಾರವನ್ನು ಸುಮಾರು ಹತ್ತು ವರ್ಷಗಳ ಹಿಂದೆಯೇ ತೆಗೆದುಕೊಂಡಿತ್ತು. ಆದರೆ ಹೆಚ್ಚಿನ ರೆಸ್ಟೋರೆಂಟ್‌ಗಳು ಅದನ್ನು ಪಾಲಿಸಿರಲಿಲ್ಲ ಎಂದು ರಾವ್ ತಿಳಿಸಿದರು.
ಈ ನಿಯಮವನ್ನು ನಗರದಲ್ಲಿ ಜಾರಿಗೊಳಿಸುವ ಬಗ್ಗೆ ತಾನು ಬೆಂಗಳೂರು ರೆಸ್ಟೋರೆಂಟ್ ಮಾಲಕರ ಸಂಘದೊಂದಿಗೆ ಮಾತುಕತೆ ನಡೆಸಿದ್ದೆ ಎಂದು ತಿಳಿಸಿದ ಬೆಂಗಳೂರಿನ ಮೇಯರ್ ಜಿ.ಪದ್ಮಾವತಿ ಅವರು, ಈ ವಿಷಯದಲ್ಲಿ ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸುತ್ತಾರೆ. ರೆಸ್ಟೋರೆಂಟ್‌ಗಳು ತಮ್ಮಲ್ಲಿಯ ವಾಷ್‌ರೂಮ್‌ನ ಉಚಿತ ಬಳಕೆಗೆ ಜನರಿಗೆ ಅವಕಾಶ ನೀಡಬೇಕು ಎಂದು ಕೇಂದ್ರವು ಆದೇಶ ಹೊರಡಿಸಿದ ಬಳಿಕ ಅದನ್ನು ಇಲ್ಲಿ ಜಾರಿಗೊಳಿಸಲು ನಾವು ನಿರ್ಧರಿಸಿದೆವು ಎಂದರು.
ಬುಧವಾರ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಂಡಳಿ ಸಭೆಯಲ್ಲಿ ಈ ಬಗ್ಗೆ ಆದೇಶ ಹೊರಡಿಸಲಾಗಿದೆ.