ಸ್ಥಾನ ಉಳಿಸಿಕೊಳ್ಳಲು ತನ್ನ ಮಗುವನ್ನೇ ತನ್ನದಲ್ಲ ಎಂದ ಪಂಚಾಯತ್ ಸದಸ್ಯೆ!
ಡಿಎನ್‌ಎ ಪರೀಕ್ಷೆಯಲ್ಲಿ ಸಿಕ್ಕಿಬಿದ್ದರು

ಆಹ್ಮದ್ ನಗರ, ಮೇ 3: ಮಹಾರಾಷ್ಟ್ರದ ಪಂಚಾಯತ್ ಚುನಾವಣೆಯಲ್ಲಿ ಇಬ್ಬರು ಮಕ್ಕಳ ಕಾನೂನಿನಲ್ಲಿ ಸಿಲುಕಿಕೊಂಡಿದ್ದ ಮೂರು ಮಕ್ಕಳ ತಾಯಿ ತನ್ನ ಸದಸ್ಯತ್ವವನ್ನು ಉಳಿಸಿಕೊಳ್ಳಲು ಕೋರ್ಟಿನಲ್ಲಿ ಮೂರನೆ ಮಗು ಇಲ್ಲ ಎಂದು ನಿರಾಕರಿಸಿ ಸಿಕ್ಕಿಬಿದ್ದಿದ್ದಾರೆ. ಮಹರಾಷ್ಟ್ರದ ಕಾನೂನು ಪ್ರಕಾರ ಎರಡು ಮಕ್ಕಳಿದ್ದವರು ಮಾತ್ರ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಮೂರನೆ ಮಗು ಇದ್ದರೆ ಅಂತಹವರು ಅಲ್ಲಿ ಪಂಚಾಯತ್ ಚುನಾವಣೆ ಸ್ಪರ್ಧಿಸಲು ಅನರ್ಹರಾಗುತ್ತಾರೆ. ಆದ್ದರಿಂದ ಮೂರನೆ ಮಗು ಇರುವುದನ್ನು ತಿರಸ್ಕರಿಸಿ ತನ್ನ ಪಂಚಾಯತ್ ಸದಸ್ಯ ಸ್ಥಾನವನ್ನುಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ನಂತರ ನಡೆಸಲಾದ ಡಿಎನ್‌ಎ ಪರಿಕ್ಷೆಯಲ್ಲಿ ಮೂರನೆ ಮಗು ಕೂಡಾ ಅದೇ ಮಹಿಳೆಯದ್ದು ಎಂದು ಸಾಬೀತು ಗೊಂಡಿದೆ. ಸರ್ವೋಚನ್ಯಾಯಾಲಯ ಮಹಿಳೆಯನ್ನು ಪಂಚಾಯತ್ ಸದಸ್ಯೆ ಸ್ಥಾನದಿಂದ ಅನರ್ಹ ಗೊಳಿಸಿದ ನಿರ್ಧಾರಕ್ಕೆ ಮುದ್ರೆಯೊತ್ತಿದೆ.
ಮಹಾರಾಷ್ಟ್ರ ಅಹ್ಮದ್ ನಗರದ ಚಿಂಚೋಡಿ ಪಂಚಾಯತ್ ಸದಸ್ಯೆ ಅನಿತಾ ಏಕನಾಥ್‌ರನ್ನು ಮೂರು ಮಕ್ಕಳನ್ನು ಹೊಂದಿರು ವ ಕಾರಣಕ್ಕೆ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ನಾಸಿಕ್ ಅಡಿಶನಲ್ ಕಮಿಶನ್‌ರ ಬಳಿ ದೂರು ಬಂದಿತ್ತು. ಅವರು ಸಾಕ್ಷಿಗಳ ಆಧಾರದಲ್ಲಿ ಮಹಿಳೆಯನ್ನು ಅನರ್ಹಗೊಳಿಸಿದ್ದರು.ಆದರೆ ಅನಿತಾ ನಿರ್ಧಾರದ ವಿರುದ್ಧ ಉಚ್ಚನ್ಯಾಯಾಲಯ ಹೋಗಿದ್ದರು. ಅಲ್ಲಿಂದ ಪ್ರಕರಣವನ್ನು ಸರ್ವೋಚನ್ಯಾಯಾಲಯದವರೆಗೆ ಮುಂದುವರಿಸಿದ್ದರು. ಮೂರನೆ ಮಗು ತನ್ನದಲ್ಲ.ಬೇಕಿದ್ದರೆ ಡಿಎನ್‌ಎ ಪರೀಕ್ಷೆಗೂ ಸಿದ್ಧ ಎಂದು ಅನಿತಾ ಹೇಳಿದ್ದರು. ನ್ಯಾಯಾಲಯ ಡಿಎನ್‌ಎ ಪರೀಕ್ಷೆಗೆ ಆದೇಶಿಸಿತು. ಅದರಲ್ಲಿ ಆ ಮೂರನೆ ಮಗು ಕೂಡಾ ಅನಿತಾರದ್ದೇ ಎಂದು ಸಾಬೀತುಗೊಂಡಿತು. ನಂತರ ಸುಪ್ರೀಮ್ ಕೋರ್ಟು ಅನಿತಾರನ್ನು ಅನರ್ಹಗೊಳಿಸುವ ನಿರ್ಧಾರಕ್ಕೆ ತನ್ನ ಮುದ್ರೆಯನ್ನು ಒತ್ತಿದೆ.







